ನವದೆಹಲಿ: ಇತ್ತೀಚೆಗೆ ವಿದೇಶಿ ಸುದ್ದಿವಾಹಿನಿಯಲ್ಲಿ ಸಂದರ್ಶಕಿಗೆ ಖಡಕ್ ಉತ್ತರ ಕೊಟ್ಟು ಕೇಂದ್ರ ಮಂತ್ರಿ ಹರ್ದೀಪ್ಸಿಂಗ್ ಪುರಿ ದೇಶಾದ್ಯಂತ ಜನರ ಮನಸ್ಸನ್ನು ಗೆದ್ದಿದ್ದರು. ಈಗ ಅವರು ಎಲ್‌ಪಿಜಿ ಸಿಲಿಂಡರ್ ಮೇಲೆ ಕ್ಯೂಆರ್ ಕೋಡ್ ಅಂಟಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.
ಕಳ್ಳತನವನ್ನು ನಿಯಂತ್ರಿಸಿ ಟ್ರ್ಯಾಕಿಂಗ್ ನಡೆಸಲು ಎಲ್‌ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್ ಕೋಡ್‌ಗಳೊಂದಿಗೆ ಬರಲಿವೆ. ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು (ಬುಧವಾರ) ಪ್ರಕಟಿಸಿದ್ದಾರೆ.
ಮೊಬೈಲ್ನಿಂದ ಸುಲಭವಾಗಿ ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್‌ಅನ್ನು ಸುಮಾರು 20,000 LPG ಸಿಲಿಂಡರ್‌ಗಳಿಗೆ ಮೊದಲ ಕಂತಿನಲ್ಲಿ ಎಂಬೆಡ್ ಮಾಡಲಾಗುತ್ತದೆ. ಇದರಿಂದ ಯಾವ ಸಿಲಿಂಡರ್ ಎಲ್ಲಿದೆ ಎನ್ನುವ ಮಾಹಿತಿ ತಕ್ಷಣ ಸಿಗುತ್ತದೆ.
'ಸದ್ಯಕ್ಕೆ ಕ್ಯೂಆರ್ ಕೋಡ್‌ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಮುಂದೆ ಉತ್ಪಾದನೆ ಆಗಲಿರುವ ಹೊಸ ಸಿಲಿಂಡರ್‌ಗಳ ಮೇಲೆ ಕ್ಯೂಆರ್ ಕೋಡ್ ವೆಲ್ಡ್ ಮಾಡಲಾಗುತ್ತದೆ. ಈ ವ್ಯವಸ್ಥೆ ಸಕ್ರಿಯಗೊಂಡಾಗ ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ದಾಸ್ತಾನು ನಿರ್ವಹಣೆಯಂತಹ ಅನೇಕ ಸಮಸ್ಯೆಗಳನ್ನು ಸುಲಭಾವಾಗಿ ಪರಿಹರಿಸಬಹುದು' ಎಂದು ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.
ವರದಿಗಳ ಪ್ರಕಾರ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳು ಕ್ಯೂಆರ್ ಕೋಡ್‌ನೊಂದಿಗೆ ನಿಮ್ಮ ಮನೆಯಂಗಳಕ್ಕೆ ಬಂದು ಇಲಿಯಲಿವೆ. ಇನ್ನು ಹಳೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ವಿಶೇಷ ಸ್ಟಿಕ್ಕರ್ ಅನ್ನು ಸೇರಿಸಲಾಗುವುದು.