ಬದಿಯಡ್ಕ: ನಾವು ಸ್ವಾವಲಂಬಿಗಳಾದಾಗ ನಮ್ಮ ಮನೆ, ನಾಡು, ಜಿಲ್ಲೆ, ರಾಜ್ಯ, ದೇಶ ಸ್ವಾವಲಂಬಿಯಾಗುತ್ತದೆ ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಿಬರಬೇಕು. ತನ್ಮೂಲಕ ವಿಶ್ವಗುರು ಭಾರತ ಪರಿಕಲ್ಪನೆ ಪರಿಪೂರ್ಣವಾಗಲು ಸಾಧ್ಯವಿದೆ. ಪ್ರತಿಯೊಬ್ಬ ಪ್ರಜೆಗೂ ಜೀವನಕ್ಕೆ ಒಂದೊಂದು ದಾರಿಗಳು ತೆರೆದಿರುತ್ತವೆ. ಅದನ್ನು ಸರಿಯಾಗಿ ಬಳಸಿ ಹೇಗೆ ಮುಂದುವರಿಯಬೇಕು ಎಂಬುದಕ್ಕೆ ಉತ್ತರವಾಗಿ ಇಂತಹ ಕಾರ್ಯಾಗಾರಗಳು ನೆರವಾಗುತ್ತವೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನದ ನುಡಿಗಳನ್ನಾಡಿದರು.
ಎಡನೀರು ಮಠದಲ್ಲಿ ಶುಕ್ರವಾರ ಜರಗಿದ ಸ್ವಾವಲಂಬಿ ಭಾರತ ಅಭಿಯಾನದ ಕಾಸರಗೋಡು ಜಿಲ್ಲಾ ಸಮಿತಿಯ ಏಕದಿನ ಕಾರ್ಯಾಗಾರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕಾಲಮೇಲೆ ನಾವು ನಿಲ್ಲಬೇಕು. ಯಾವ ರೀತಿಯಿಂದ ನಾವು ಸ್ವಾವಲಂಬಿಗಳಾಗಬೇಕು? ಯಾರಿಗೂ ಭಾರವಾಗದಂತೆ ನಮ್ಮ ಕುಟುಂಬವನ್ನು ನಾವು ಹೇಗೆ ಮುನ್ನಡೆಸಬಹುದು ಎಂಬ ಅರಿವಿನ ಕೊರತೆಯು ನೀಗಲಿ. ಇಂತಹ ಅಭಿಯಾನದಲ್ಲಿ ಎಲ್ಲರೂ ಒಂದುಗೂಡಬೇಕು. ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಮ್ಮಿಕೊಂಡ ಈ ಯೋಜನೆಯ ಸಾಕಾರಕ್ಕೆ ಪ್ರತಿಯೊಬ್ಬರೂ ಮನಮಾಡಬೇಕು. ನಮ್ಮ ಬದುಕು ಯಾರಿಗೂ ಭಾರವಾಗಬಾರದು ಎಂಬ ಚಿಂತೆ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.
ಸ್ವಾವಲಂಬಿ ಭಾರತ ಅಭಿಯಾನದ ಜಿಲ್ಲಾ ಮುಖಂಡ ವಕೀಲ ಕೆ.ಶ್ರೀಕಾಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನೇಕ ಸವಾಲುಗಳನ್ನು ಮೆಟ್ಟಿನಿಂತು ಭಾರತವು ಅಭಿವೃದ್ಧಿಯನ್ನು ಕಾಣುತ್ತಿದೆ. ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಎದುರಾಗಬಾರದು ಎಂಬ ಚಿಂತನೆ ನಾವು ಮಾಡಬೇಕಾಗಿದೆ. ಹತ್ತು ಜನರಿಗೆ ಕೆಲಸ ನೀಡುವ ಸಂಸ್ಥೆಯ ಉಗಮವಾಗಬೇಕು ಎಂಬುದು ಈ ಅಭಿಯಾನದ ಉದ್ದೇಶವಾಗಿದೆ. ಸಂಸ್ಕøತದಲ್ಲಿ ನಿರುದ್ಯೋಗ ಎಂಬುದಕ್ಕೆ ಶಬ್ದವೇ ಇಲ್ಲ. ಯಾಕೆಂದರೆ ಹಿರಿಯರ ಕಾಲದಲ್ಲಿ ಆ ಸಮಸ್ಯೆಯೇ ಇಲ್ಲವಾಗಿತ್ತು ಎಂದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಞಂಗಾಡು ಜಿಲ್ಲಾ ಕಾರ್ಯವಾಹ ದಾಮೋದರನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಧರ್ಮದ ಆಧಾರದಲ್ಲಿ ಭಾರತವಿದೆ. ಭಾರತೀಯ ಸಂಸ್ಕಾರ, ಮೌಲ್ಯವನ್ನು ಎತ್ತಿಹಿಡಿದು ಸಮಾಜಕ್ಕೆ ಏನನ್ನಾದರೂ ನೀಡಿ ಪ್ರಭಾವೀ ಭಾರತವನ್ನು ಸೃಷ್ಟಿಸಬೇಕು. ಹಿಂದಿನ ಕಾಲದ ವೈಭವ ಮತ್ತೆ ಮರುಕಳಿಸಬೇಕು. ಪ್ರತಿಯೊಬ್ಬರು ಸ್ವಂತಕಾಲಿನಲ್ಲಿ ನಿಲ್ಲುವಂತಾಗಬೇಕು. ಜನರಿಗೆ ಉದ್ಯೋಗ ನೀಡುವ ವ್ಯಕ್ತಿಗಳಾಗಿ ನಾವು ಬದಲಾಗಬೇಕು ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಸ್ವದೇಶೀ ಜಾಗರಣ ಮಂಚ್ ಕೇರಳ ರಾಜ್ಯ ಕಾರ್ಯದರ್ಶಿ ಒ.ಎನ್.ಶ್ರೀಜಿತ್, ಜಿಲ್ಲಾ ಸಂಚಾಲಕ ಮಣಿಕಂಠ ರೈ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ರಾಧಾಕೃಷ್ಣನ್ ಸ್ವಾಗತಿಸಿ, ಎನ್.ಟಿ.ಯು. ಜಿಲ್ಲಾ ಅಧ್ಯಕ್ಷ ಪ್ರಭಾಕರನ್ ವಂದಿಸಿದರು. ಸುನಿಲ್ ಪಿ.ಆರ್. ನಿರೂಪಿಸಿದರು.