ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯವೆಂದರೆ ಇತರರರನ್ನು ಮತಾಂತರ ಮಾಡುವುದಕ್ಕೆ ಇರುವ ಹಕ್ಕು ಅಂತ ಅಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.
ಒಬ್ಬ ವ್ಯಕ್ತಿಯನ್ನು ವಂಚನೆ, ಆಮಿಷ, ದಬ್ಬಾಳಿಕೆಗಳ ಮೂಲಕ ಮತ್ತೊಂದು ಧರ್ಮಕ್ಕೆ ಮತಾಂತರ
ಮಾಡುವುದು ಮೂಲಭೂತ ಹಕ್ಕುಗಳ ಅಡಿಯಲ್ಲಿ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ
ತಿಳಿಸಿದ್ದು, ಸಮಾಜದ ದುರ್ಬಲ ವರ್ಗದವರ ಹಕ್ಕುಗಳನ್ನು ರಕ್ಷಿಸಲು ಮತಾಂತರವೆಂಬ
ಅರಿವುಳ್ಳ ಅಪಾಯವನ್ನು ತಡೆಗಟ್ಟಲು ಕಾನೂನು ಅಗತ್ಯವಿದೆ ಎಂದು ಹೇಳಿದೆ.
ಅಡ್ವೊಕೇಟ್ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಆಮಿಷವೊಡ್ಡುವ ಮೂಲಕ ಮತಾಂತರ
ಮಾಡುವುದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ಕೋರಿ
ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ ಪ್ರಮಾಣಪತ್ರವನ್ನು ಸಲ್ಲಿಸಿದ ವೇಳೆ ಈ
ನಿಲುವನ್ನು ಘೋಷಿಸಿದೆ.
ಕೇಂದ್ರ ಸರ್ಕಾರ ಗೃಹ ಸಚಿವಾಲಯದ ಉಪ ಕಾರ್ಯದರ್ಶಿಯ ಮೂಲಕ ಪ್ರಮಾಣ ಪತ್ರ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ನ್ಯಾ.ಎಂಆರ್ ಷಾ, ನ್ಯಾ. ಸಿಟಿ ರವಿಕುಮಾರ್ ಅವರ ಪೀಠ ನಡೆಸುತ್ತಿದೆ.
ಕೋರ್ಟ್, ಧಾರ್ಮಿಕ ಮತಾಂತರದ ವಿರುದ್ಧವಲ್ಲ, ಬದಲಾಗಿ ಒತ್ತಾಯಪೂರ್ವಕ ಮತಾಂತರದ ವಿರುದ್ಧವಾಗಿದೆ ಎಂಬುದನ್ನು ನ್ಯಾಯಪೀಠ ಮನಗಂಡಿದ್ದು, ಈ ವಿಷಯವಾಗಿ ಕೇಂದ್ರಕ್ಕೆ ವಿಸ್ತೃತ ಪ್ರಮಾಣಪತ್ರ ಸಲ್ಲಿಸುವಂತೆ ಸೂಚಿಸಿತ್ತು.