ನವದೆಹಲಿ: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನಡೆದ 'ನೀಟ್(ಪಿಜಿ) 2022'ರಲ್ಲಿ ಮೀಸಲು ಪ್ರವರ್ಗದ ಅಭ್ಯರ್ಥಿಗಳು ಸಾಮಾನ್ಯ ಪ್ರವರ್ಗದಲ್ಲಿ ಸ್ಪರ್ಧಿಸಬಹುದಾದಷ್ಟು ಅಂಕಗಳನ್ನು ಗಳಿಸಿದ್ದರೂ ಅವರನ್ನು ಅಖಿಲ ಭಾರತ ಕೋಟಾದ ಮೀಸಲು ಪ್ರವರ್ಗದ ಅಭ್ಯರ್ಥಿಗಳು ಎಂದೇ ಪರಿಗಣಿಸಲಾಗುತ್ತದೆಯೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಹಿಮಾ ಕೊಹ್ಲಿ, ಜೆ.ಬಿ. ಪಾರ್ದಿವಾಲಾ ಅವರನ್ನೊಳಗೊಂಡ ಪೀಠವು, ಈ ಕುರಿತು ಮೂರು ದಿನಗಳಲ್ಲಿ ಪ್ರಮಾಣ ಪತ್ರ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಮಂಗಳವಾರ ಸೂಚಿಸಿತು.
ಇದಕ್ಕೂ ಮುನ್ನ ಐಶ್ವರ್ಯ ಭಾಟಿ ಅವರು, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಅನುಸರಿಸುವ ಮೀಸಲಾತಿ ಮತ್ತು ರೋಸ್ಟರ್ ವಿಧಾನ ಕುರಿತ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. 'ಅಡ್ಮಿಷನ್ ಬ್ರೌಷರ್'ನ ಪ್ಯಾರಾ 3.1 ಮತ್ತು 3.2ರ ಪ್ರಕಾರವೇ ನೀಟ್-ಪಿಜಿಯ ಅಖಿಲ ಭಾರತ ಕೋಟಾದ ಕೌನ್ಸೆಲಿಂಗ್‌ನಲ್ಲಿ ಸೀಟುಗಳು ಹಂಚಿಕೆಯಾಗಲಿವೆ ಎಂದು ಅವರು ಅದರಲ್ಲಿ ತಿಳಿಸಿದ್ದಾರೆ.
ಪಂಕಜ್ ಕುಮಾರ್ ಮಂಡಲ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು, ಈ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್ ಅವರು, ಅತ್ಯುತ್ತಮ ಅಂಕಗಳನ್ನು ಪಡೆದಿರುವ ಮೀಸಲು ಪ್ರವರ್ಗದ ಅಭ್ಯರ್ಥಿಗಳು ಸಾಮಾನ್ಯ ಪ್ರವರ್ಗದಲ್ಲಿ ಸೀಟು ಪಡೆಯಲು ಅರ್ಹತೆ ಪಡೆದಿರುತ್ತಾರೆ. ಆದರೂ ಅವರನ್ನು ಮೀಸಲು ಪ್ರವರ್ಗದಲ್ಲಿಯೇ ಗುರುತಿಸಲಾಗುತ್ತಿದೆ. ಇದು ಮೀಸಲು ನಿಯಮಕ್ಕೆ ವಿರುದ್ಧ ಎಂದು ಪ್ರತಿಪಾದಿಸಿದರು.
'73ನೇ ರ್‍ಯಾಂಕ್ ಪಡೆದಿರುವ ಒಬಿಸಿ ಅಭ್ಯರ್ಥಿಯು ಸಾಮಾನ್ಯ ಪ್ರವರ್ಗದಡಿ ಸೀಟು ಪಡೆಯಲು ಅರ್ಹರಾಗಿದ್ದಾರೆ. ಆದರೆ ಅವರನ್ನು ಮೀಸಲು ಅಭ್ಯರ್ಥಿಯೆಂದೇ ಪರಿಗಣಿಸಲಾಗಿದೆ. ಇದು ಮತ್ತೊಬ್ಬ ಮೀಸಲು ಅಭ್ಯರ್ಥಿಯ ಮೇಲೆ ಪರಿಣಾಮ ಬೀರುತ್ತದೆ' ಎಂದು ಭೂಷಣ್ ಉದಾಹರಣೆ ಸಹಿತ ವಾದಿಸಿದರು.
ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ ಹೊರಡಿಸಿರುವ ಸೀಟ್ ಮ್ಯಾಟ್ರಿಕ್ಸ್ ಪ್ರಕಟಣೆ ಪ್ರಕಾರ ಅಖಿಲ ಭಾರತ ಕೋಟಾದಡಿ 10,954 ಸೀಟುಗಳು ಲಭ್ಯವಿವೆ.