ಬದಿಯಡ್ಕ: ದಂತ ವೈದ್ಯ ಡಾ. ಕೃಷ್ಣಮೂರ್ತಿ ಸರ್ಪಂಗಳ ಸಂಸ್ಮರಣಾ ಸಮಾರಂಭ ಬದಿಯಡ್ಕ ಗುರುಸದನದಲ್ಲಿ ಮಂಗಳವಾರ ಜರುಗಿತು. ವಿಶ್ವ ಹಿಂದೂ ಪರಿಷತ್-ಬಜರಂಗದಳ ಬದಿಯಡ್ಕ ಸಮಿತಿ ವತಿಯಿಂದ ಕಾರ್ಯಕ್ರಮ ಜರುಗಿತು.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಡಾ. ಕೃಷ್ಣಮೂರ್ತಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿದ ನಂತರ ಮಾತನಾಡಿದ ಅವರು, ಸಮಾಜ ಇಂದು ಕ್ಲಿಷ್ಟಕರ ಸನ್ನಿವೇಶ ಎದುರಿಸುತ್ತಿದ್ದು, ಇದರ ವಿರುದ್ಧ ಹಿಂದೂ ಸಮಾಜ ಒಗ್ಗಟ್ಟಿನಿಂದ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಹಿಂದೂ ಸಮಾಜವನ್ನು ಒತ್ತಡಕ್ಕೆ ಸಿಲುಕುವಂತೆ ಮಾಡಿ, ಇದರ ಲಾಭವನ್ನು ಪಡೆಯಲು ಕೆಲವು ಶಕ್ತಿಗಳು ಸಂಚು ರೂಪಿಸುತ್ತಿದೆ. ಇದರ ಫಲವಾಗಿ ಬದಿಯಡ್ಕದ ಖ್ಯಾತ ವೈದ್ಯ ಡಾ. ಕೃಷ್ಣಮೂರ್ತಿ ಅವರು ಜೀವಕಳೆದುಕೊಳ್ಳಬೇಕಾಗಿ ಬಂದಿದೆ. ದೂರದ ಕಾಶ್ಮೀರದಲ್ಲಿ ಕೆಳಿಬರುತ್ತಿದ್ದ ಮತಾಂಧರ ಅಟ್ಟಹಾಸ ನಮ್ಮಲ್ಲಿಗೂ ಕಾಲಿರಿಸಿದ್ದು, ಇದರ ವಿರುದ್ಧ ಹೋರಾಟಕ್ಕೆ ಹಿಂದೂ ಸಮಾಜ ತಯಾರಾಗಬೇಕು ಎಂದು ತಿಳಿಸಿದರು.
ಆರೆಸ್ಸೆಸ್ ಮುಖಂಡ ಶಿವಶಂಕರ ಭಟ್ ಮುಖ್ಯ ಭಾಷಣ ಮಾಡಿದರು. ಡಾ. ವೈ.ವಿ ಕೃಷ್ಣಮೂರ್ತಿ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ನರೇಂದ್ರ ಬದಿಯಡ್ಕ ಉಪಸ್ಥೀತರಿದ್ದರು. ವಿಹಿಂಪ ಬದಿಯಡ್ಕ ಸಮಿತಿ ಕಾರ್ಯದರ್ಶಿ ಹರಿಪ್ರಸಾದ್ ಸ್ವಾಗತಿಸಿದರು. ಮಂಜುನಾಥ ಮಾನ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.