ಹಾಮ್ರೆನ್ : 'ಅಸ್ಸಾಂ-ಮೇಘಾಲಯ ಗಡಿಯ ಮುಕ್ರೋಹ್‌ನಲ್ಲಿ ಘರ್ಷಣೆಯ ಬಳಿಕ ಇದೀಗ ಶಾಂತಿ ನೆಲೆಸಿದ್ದು, ಉದ್ವಿಗ್ನ ವಾತಾವರಣ ಮುಂದುವರಿದಿದೆ.
'ಗಲಭೆ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
'ಘರ್ಷಣೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ. ಪರಿಸ್ಥಿತಿ ತಿಳಿಯಾಗುವವರೆಗೂ ಭದ್ರತಾ ಪಡೆಯನ್ನು ನಿಯೋಜಿಸಲಾಗುವುದು. ನಮ್ಮ ಹಿರಿಯ ಅಧಿಕಾರಿಗಳು ಪ್ರತಿ ದಿನ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ' ಎಂದೂ ಹೇಳಿದರು.
ಮಂಗಳವಾರ ಮುಂಜಾನೆ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ವಿವಾದಿತ ಗಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಅಸ್ಸಾಂನ ಅರಣ್ಯ ಸಿಬ್ಬಂದಿ ತಡೆದಾಗ ಘರ್ಷಣೆ ಸಂಭವಿಸಿ, ಆರು ಮಂದಿ ಮೃತಪಟ್ಟಿದ್ದರು.
ಗುರುವಾರ ಮೇಘಾಲಯದಲ್ಲಿ ಕನಿಷ್ಠ ಐದು ಸಾಮಾಜಿಕ ಸಂಘಟನೆಗಳು ಶಾಂತಿಯುತ ಪ್ರತಿಭಟನೆ ನಡೆಸಿದ್ದು, ಗಲಭೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.