ನವದೆಹಲಿ : ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯಷ್ಟೇ ಪ್ರಾಧಾನ್ಯತೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಈ ಸಂಬಂಧ ನೀಡಿರುವ ಪ್ರತಿಕ್ರಿಯೆಯನ್ನು ದಾಖಲೆಯಲ್ಲಿ ಇರಿಸಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ.
'ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರವು ಅಫಿಡವಿಟ್ ಸಲ್ಲಿಸಿದೆ. ಕೇಂದ್ರದ ನಿಲುವೇನು. ಅವರು ನೀಡಿರುವ ಪ್ರತಿಕ್ರಿಯೆ ಏನು ಎಂಬುದನ್ನು ಮೊದಲು ಪರಿಶೀಲಿಸಬೇಕಿದೆ. ಆದರೆ ಅದು ನ್ಯಾಯಾಲಯದ ದಾಖಲೆಯಲ್ಲಿ ಇಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠ ತಿಳಿಸಿತು.
'ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ಅನ್ನು ನ್ಯಾಯಾಲಯದಲ್ಲಿ ವಾಚಿಸಬೇಕು ಹಾಗೂ ಈ ಸಂಬಂಧ ಸೂಕ್ತ ನಿರ್ದೇಶನಗಳನ್ನು ನೀಡಬೇಕು' ಎಂದು ಅರ್ಜಿದಾರರಾದ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ನ್ಯಾಯಪೀಠಕ್ಕೆ ಒತ್ತಾಯಿಸಿದರು.
'ಅಫಿಡವಿಟ್ ಅನ್ನು ತಡವಾಗಿ ಸಲ್ಲಿಸಿದ್ದರಿಂದ ಅದನ್ನು ನ್ಯಾಯಾಲಯದ ದಾಖಲೆಗಳಲ್ಲಿ ಇರಿಸಲು ಸಾಧ್ಯವಾಗಿಲ್ಲ' ಎಂದು ಕೇಂದ್ರ ಸರ್ಕಾರದ ಪರ ವಕೀಲ ಮನೀಶ್ ಮೋಹನ್ ನ್ಯಾಯಪೀಠಕ್ಕೆ ತಿಳಿಸಿದರು.
'ವಿಳಂಬವನ್ನು ನಾವು ಕ್ಷಮಿಸಿದ್ದೇವೆ. ಅಫಿಡವಿಟ್ ಅನ್ನು ದಾಖಲೆಯಲ್ಲಿ ಇರಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ' ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ಡಿಸೆಂಬರ್ 22ಕ್ಕೆ ಮುಂದೂಡಿತು.