ಚೆನ್ನೈ: ಸಾಮಾನ್ಯವಾಗಿ ಕಳೆದು ಹೋದ ವ್ಯಕ್ತಿಗಳನ್ನು ಹುಡುಕುವುದನ್ನು ನಾವು ನೋಡಿದ್ದೇವೆ. ಆದರೆ, ತಮಿಳುನಾಡು ವ್ಯಕ್ತಿಯೊಬ್ಬ ತಂದೆಯ ಸಮಾಧಿ ಹುಡುಕಿಕೊಂಡು ಮಲೇಷಿಯಾಗೆ ಪ್ರಯಾಣ ಬೆಳೆಸಿದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯ ಸಮಾಧಿ ಹುಡುಕಲು ನೆರವು ನೀಡಿದ್ದು ಗೂಗಲ್ ಎಂಬುದೇ ಇಲ್ಲಿನ ಹುಬ್ಬೇರಿಸುವ ಸಂಗತಿ.
ತಂದೆಯ ಸಮಾಧಿ ಹುಡುಕಿ ಹೊರಟ ಥಿರುಮಾರನ್ (56) ಕೊನೆಗೂ ತಮ್ಮ ತಂದೆಯ ಅಂತಿಮ ಸ್ಥಳವನ್ನು ಪತ್ತೆಹಚ್ಚಿ ಗೌರವ ಸಲ್ಲಿಸಿ ಬಂದಿದ್ದಾರೆ.
ವಿವರಣೆಗೆ ಬರುವುದಾದರೆ, ಥಿರುಮಾರನ್ ಅವರ ತಂದೆ ರಾಮಸುಂದರಮ್ ತನ್ನ ಪತ್ನಿ ರಾಧಾಭಾಯ್ ಜೊತೆ ಮಲೇಷಿಯಾದಲ್ಲಿ ನೆಲೆಸಿದ್ದರು. ರಾಮಸುಂದರಂ ಮಲೇಷಿಯಾದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಹೀಗಾಗಿ ಕುಟುಂಬ ಸಮೇತ ಅಲ್ಲಿಯೇ ನೆಲೆಸಿದ್ದರು. ಆದರೆ, 1967ರಲ್ಲಿ ರಾಮಸುಂದರಂ ಮೃತರಾದರು. ಬಳಿಕ ಅವರ ಪತ್ನಿ ರಾಧಾಬಾಯಿ ಮಲೇಷಿಯಾದಲ್ಲಿಯೇ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ತಮಿಳುನಾಡಿಗೆ ಮರಳಿದ್ದರು. ಆ ಸಮಯದಲ್ಲಿ ರಾಧಾಭಾಯಿ ಗರ್ಭಿಣಿ ಆಗಿದ್ದರು. ತಮಿಳುನಾಡಿಗೆ ಬಂದ ಕೆಲವೇ ದಿನಗಳಲ್ಲಿ ಥಿರುಮಾನ್ ಜನಿಸಿದರು. ಇದಾದ ಕೆಲವೇ ದಿನಗಳಲ್ಲಿ ತಾಯಿಯು ಸಹ ವಿಧಿವಶರಾದರು.
ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡ ಥಿರುಮಾನ್ ಅನಾಥರಾದರು. ತಂದೆಯ ಮುಖವನ್ನೇ ನೋಡದ ಥಿರುಮಾನ್ಗೆ ಕೊನೆಯ ಪಕ್ಷ ತಂದೆಯ ಸಮಾಧಿಯನ್ನಾದರೂ ನೋಡಬೇಕೆಂಬುದು ಬಯಕೆ ಆಗಿತ್ತು. ಬದುಕಿದ್ದಾಗ ತಾಯಿ ನೀಡಿದ ಮಾಹಿತಿಯ ಆಧಾರದ ಮೇಲೆ ತಂದೆಯ ಸಮಾಧಿಯನ್ನು ಹುಡುಕಲು ಥಿರುಮಾನ ಆರಂಭಿಸಿದ. ಗೂಗಲ್ ಸಹಾಯದಿಂದ ಮಲೇಷಿಯಾದಲ್ಲಿ ತಂದೆ ವಾಸವಿದ್ದ ಮನೆ ಹಾಗೂ ಕೆಲಸ ಮಾಡುತ್ತಿದ್ದ ಶಾಲೆಯನ್ನು ಹುಡುಕಿದ.
ಶಾಲೆಯ ಇಮೇಲ್ ವಿಳಾಸವನ್ನು ಕಂಡುಕೊಂಡ ಥಿರುಮಾರನ್, ತನ್ನ ತಂದೆಯ ಸಮಾಧಿಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುವಂತೆ ಒಂದು ಈ ಮೇಲ್ ಸಂದೇಶವನ್ನು ಶಾಲೆಗೆ ಕಳುಹಿಸಿದನು. ಬಳಿಕ ಶಾಲೆಯ ಪ್ರಾಂಶುಪಾಲರು ಮತ್ತು ಕೆಲವರು ಪ್ರತಿಕ್ರಿಯಿಸಿದ ಪರಿಣಾಮ ಥಿರುಮಾರನ್ ಅವರ ತಂದೆಯ ಸಮಾಧಿಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಇದೇ ತಿಂಗಳ 8ರಂದು ಥಿರುಮಾರನ್ ಮಲೇಷಿಯಾಗೆ ತೆರಳಿ ತಂದೆಯ ಸಮಾಧಿಯನ್ನು ನೋಡಿ, ಕಣ್ಣೀರು ಸುರಿಸಿ, ಗೌರವ ಸಲ್ಲಿಸಿದ್ದಾರೆ. ಅಂದಹಾಗೆ ಥಿರುಮಾರನ್ ಸಾಮಾಜಿಕ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದಾರೆ.