ಬದಿಯಡ್ಕ: ಕಾಸರಗೋಡು-ಮುಂಡಿತ್ತಡ್ಕ ರಸ್ತೆಯ ಮಾನ್ಯ ಪರಿಸರದಲ್ಲಿ ಇದೀಗ ರಸ್ತೆ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆಯ ಸುಮಾರು ಎಂಟು ಬಸ್ಸುಗಳು ಯಾನ ಮೊಟಕುಗೊಳಿಸಿವೆ. ಇದರಿಂದಾಗಿ ಈ ಪರಿಸರದ ನೂರಾರು ಜನರು ಸಂಕಷ್ಟಕ್ಕೀಡಾಗಿದ್ದಾರೆ. ವಿದ್ಯಾರ್ಥಿಗಳು, ಮಹಿಳೆಯರು ಸಹಿತ ದೈನಂದಿನ ಪ್ರಯಾಣಿಕರು ಬಸ್ ಸೌಕರ್ಯದ ಕೊರತೆಯಿಂದ ದಿಕ್ಕೆಟ್ಟಿದ್ದಾರೆ.
ಈ ನಿಟ್ಟಿನಲ್ಲಿ ಸ್ಥಳೀಯರು ಬಸ್ಸು ಮಾಲಕರು, ಸಾರಿಗೆ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿದ್ದು, ಎರಡು ದಿನಗಳ ಹಿಂದೆ ರಸ್ತೆ ತಡೆಯನ್ನು ಸಹ ನಡೆಸಿದ್ದರು. ಆದರೂ ಅಧಿಕೃತರು ಸ್ಥಳೀಯರ ಬೇಡಿಕೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಶನಿವಾರ ಸಾರಿಗೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯತಿ ಸದಸ್ಯರುಗಳಾದ ಶ್ಯಾಮ ಪ್ರಸಾದ್ ಮಾನ್ಯ, ಅನಸೂಯ, ಸ್ಥಳೀಯರಾದ ಮಹೇಶ್ ವಳಕುಂಜ, ಮಧುಚಂದ್ರ ಮಾನ್ಯ, ಎ.ಎಸ್.ಅಹಮ್ಮದ್, ರಾಧಾಕೃಷ್ಣ ರೈ, ಖಾದರ್ ಮಾನ್ಯ ಮೊದಲಾದವರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.
ಕೆ.ವಿ.ವಿ.ಎ.ಎಸ್ ನಿಂದ ಮನವಿ:
ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಅನುವುಮಾಡಬೇಕೆಂದು ಆಗ್ರಹಿಸಿ ಕ್ರಮ ಕೈಗೊಳ್ಳಲು ರಾಜ್ಯ ಲೋಕೋಪಯೋಗಿ ಸಚಿವ ಮೊಹಮ್ಮದ್ ರೀಯಾಸ್ ಮತ್ತು ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ(ಕೆವಿವಿಇಎಸ್) ನೀರ್ಚಾಲು ಘಟಕದ ವತಿಯಿಂದ ಮನವಿ ಸಲ್ಲಿಸಲಾಗಿದೆ.