ನವದೆಹಲಿ: ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ 'ನಾವು ಸೇನೆಗೆ ಬೇಕಾದಷ್ಟು ಹಣ ಖರ್ಚು ಮಾಡುತ್ತಿಲ್ಲ ಎಂದಾದರೆ ಹೇಗೆ ಖರ್ಚು ಮಾಡೋದು ಎಂದು ಸಲಹೆ ನೀಡಿ' ಎಂದು ರಕ್ಷಣಾ ಖಾತೆಗಳ ಇಲಾಖೆಗೆ (ಡಿಎಡಿ) ಹೇಳಿದ್ದಾರೆ!
ಎರಡು ದಿನಗಳ ನಿಯಂತ್ರಕರ ಸಮ್ಮೇಳನದ ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, 5.25 ಲಕ್ಷ ಕೋಟಿಯ ರಕ್ಷಣಾ ಬಜೆಟ್ ಅನ್ನು ಸಮರ್ಥವಾಗಿ ಮತ್ತು ತರ್ಕಬದ್ಧವಾಗಿ ಬಳಸಬೇಕು ಎಂದು ರಾಜನಾಥ್ ಸಿಂಗ್ ಸಲಹೆ ನೀಡಿದರು.
ಬಜೆಟ್‌ನಲ್ಲಿ ಯಾವುದೇ ದುರುಪಯೋಗ ಆಗಬಾರದು ಎಂದು ಅವರು ಸ್ಪಷ್ಟವಾಗಿ ಹೇಳಿದರು.
'ಭಾರತ, ತನಗೆ ಅಗತ್ಯವಿರುವ ಎಲ್ಲಾ ರಕ್ಷಣಾ ಸಾಮಗ್ರಿಯನ್ನು ಹೊಂದಿರುವಂತೆ ಖಚಿತ ಪಡಿಸಿಕೊಳ್ಳಲು ರಕ್ಷಣಾ ಸಚಿವಾಲಯ ಹೆಚ್ಚಿನ ವೆಚ್ಚವನ್ನು ಮೀಸಲಿಟ್ಟಿದೆ. ಯಾವ ಕ್ಷೇತ್ರದಲ್ಲಿ ಕಡಿಮೆ ಹಣ ಖರ್ಚಾಗುತ್ತಿದೆ ಎನ್ನುವುದನ್ನು ಗಮನಿಸಿ ಅಲ್ಲಿ ಹೆಚ್ಚಿನ ಸೌಲಭ್ಯಗಳು ಇರುವಂತೆ ರಕ್ಷಣಾ ಖಾತೆಗಳ ಇಲಾಖೆ ಸಲಹೆ ನೀಡಬೇಕು. ಭಾರತದ ರಕ್ಷಣಾ ಬಜೆಟ್ 5.25 ಲಕ್ಷ ಕೋಟಿ. ಇದು 6 ಲಕ್ಷ ಕೋಟಿಯನ್ನು ಮೀರಬೇಕು. ಇರುವ ಹಣವನ್ನು ಸಕಾಲದಲ್ಲಿ ಅಗತ್ಯವಿರುವ ಕಡೆ ಖರ್ಚು ಮಾಡದೇ ಹೋದಲ್ಲಿ ಮುಂದಿನ ಬಜೆಟ್ ಸಂದರ್ಭ ನಮಗೆ ಸಮಸ್ಯೆ ಎದುರಾಗುತ್ತದೆ' ಎಂದು ರಾಜನಾಥ್ ಸಿಂಗ್ ಹೇಳಿದರು.