ಜಿನೀವ: ಮಾನವಹಕ್ಕುಗಳ ದಾಖಲೆಯ ವಿಷಯದಲ್ಲಿ ಸದಸ್ಯ ದೇಶಗಳು ಗುರುವಾರ ವಿಶ್ವಸಂಸ್ಥೆ(WHO)ಯಲ್ಲಿ ಭಾರತವನ್ನು ತರಾಟೆಗೆ ತೆಗೆದುಕೊಂಡವು. ಲೈಂಗಿಕ ಹಿಂಸಾಚಾರ ಮತ್ತು ಧಾರ್ಮಿಕ ತಾರತಮ್ಯ ಪ್ರಕರಣಗಳಲ್ಲಿ ಕಠಿಣ ನಿಲುವು ತೆಗೆದುಕೊಳ್ಳುವಂತೆ ಹಾಗೂ ಹಿಂಸೆ ತಡೆ ಸನ್ನದನ್ನು ಅನುಮೋದಿಸುವಂತೆ ಅವುಗಳು ಭಾರತವನ್ನು ಒತ್ತಾಯಿಸಿದವು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತ, ಮಾನವಹಕ್ಕು ಹೋರಾಟಗಾರರನ್ನು ಭಾರತವು ಗೌರವಿಸುತ್ತದೆ ಹಾಗೂ ದೇಶದಲ್ಲಿ ''ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ'' ("In the rarest of rare cases")ಮಾತ್ರ ಮರಣ ದಂಡನೆಯನ್ನು ವಿಧಿಸಲಾಗುತ್ತದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಹೇಳಿತು.
''ಯಾವುದೇ ರೀತಿಯ ಹಿಂಸೆಯನ್ನು ಭಾರತ ಖಂಡಿಸುತ್ತದೆ ಹಾಗೂ ಸ್ವೇಚ್ಛಾಚಾರದ ಬಂಧನ, ಹಿಂಸೆ, ಅತ್ಯಾಚಾರ ಅಥವಾ ಲೈಂಗಿಕ ಹಿಂಸೆ ಯಾರಿಂದ ನಡೆದರೂ ಅದರ ವಿರುದ್ಧ ಭಾರತದ ನಿಲುವು ದೃಢವಾಗಿದೆ'' ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar Mehta)ಹೇಳಿದರು.
ಹಿಂಸೆಯ ವಿರುದ್ಧದ ವಿಶ್ವಸಂಸ್ಥೆಯ ಸನ್ನದಿಗೆ ಭಾರತ ಸಹಿ ಹಾಕಿದೆ, ಆದರೆ ಅದನ್ನು ಅನುಮೋದಿಸಿಲ್ಲ.
ಭಾರತವು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯಲ್ಲಿ ಕಾಲಾವಧಿ ಜಾಗತಿಕ ಪರಿಶೀಲನೆಗೆ ಒಳಗಾಗುತ್ತಿದೆ. ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ದೇಶಗಳು ನಾಲ್ಕು ವರ್ಷಗಳಿಗೊಮ್ಮೆ ಈ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ.
''ಮಾನವಹಕ್ಕುಗಳ ಹೋರಾಟಗಾರರು, ಪತ್ರಕರ್ತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ನು ಸಾರಾಸಗಟಾಗಿ ಬಳಸುವುದನ್ನು ಭಾರತ ಕಡಿಮೆ ಮಾಡಬೇಕೆಂದು ನಾವು ಶಿಫಾರಸು ಮಾಡುತ್ತೇವೆ'' ಎಂದು ಮಾನವಹಕ್ಕುಗಳ ಮಂಡಳಿಯಲ್ಲಿ ಅಮೆರಿಕದ ರಾಯಭಾರಿ ಮಿಶೆಲ್ ಟೇಲರ್ (Michelle Taylor)ಹೇಳಿದರು.
''ಕಾನೂನು ರಕ್ಷಣೆ ಇರುವ ಹೊರತಾಗಿಯೂ, ಲಿಂಗ ಮತ್ತು ಧರ್ಮದ ಆಧಾರದಲ್ಲಿ ತಾರತಮ್ಯ ಮತ್ತು ಹಿಂಸೆ ಮುಂದುವರಿಯುತ್ತಿದೆ. ಮಾನವಹಕ್ಕುಗಳ ಹೋರಾಟಗಾರರ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನುಗಳನ್ನು ಬಳಸುತ್ತಿರುವುದರಿಂದ ಅವರು ಸುದೀರ್ಘ ಕಾಲ ಜೈಲಿನಲ್ಲಿ ಕೊಳೆಯುವಂತಾಗಿದೆ'' ಎಂದು ಅವರು ಬೆಟ್ಟು ಮಾಡಿದರು.
ಲೈಂಗಿಕ ಹಿಂಸೆಯ ಎಲ್ಲಾ ಕೃತ್ಯಗಳ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಮುಸ್ಲಿಮರ ವಿರುದ್ಧದ ಹಿಂಸಾಚಾರ ಸೇರಿದಂತೆ ಧಾರ್ಮಿಕ ಹಿಂಸೆಯ ಬಗ್ಗೆ ತನಿಖೆ ನಡೆಸುವ ಮೂಲಕ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸುವಂತೆ ಕೆನಡವು ಬಾರತವನ್ನು ಒತ್ತಾಯಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ತುಷಾರ್ ಮೆಹ್ತಾ(Tushar Mehta), ''ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನಿರಂಕುಶವಲ್ಲ, ಭಾರತದ ಸಾರ್ವಭೌಮತೆ, ಸಮಗ್ರತೆ, ಭದ್ರತೆ, ವಿದೇಶ ಸಂಬಂಧಗಳು, ಸಾರ್ವಜನಿಕ ವ್ಯವಸ್ಥೆ, ಸಭ್ಯತೆ, ನೈತಿಕತೆ, ನ್ಯಾಯಾಂಗ ನಿಂದನೆ, ಮಾನಹಾನಿ ಅಥವಾ ಅಪರಾಧಕ್ಕೆ ಪ್ರಚೋದನೆ ಮುಂತಾದ ವಿಷಯಗಳನ್ನು ಪರಿಗಣಿಸಿ ಸಕಾರಾತ್ಮಕ ನಿರ್ಬಂಧಗಳಿಗೆ ಒಳಪಟ್ಟಿದೆ'' ಎಂದು ಹೇಳಿದರು.