ಮಲಪ್ಪುರಂ: ನಾಲ್ಕು ವರ್ಷಗಳ ಹಿಂದೆ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿದ್ದ ಮಹಿಳೆ, ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯ ಕುತ್ತಿಗೆ ಶಾಲಿನಿಂದ ಸುತ್ತುವರಿದಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತಳನ್ನು ಥನೂರ್ ಮೂಲದ ಸೌಜತ್ ಎಂದು ಗುರುತಿಸಲಾಗಿದೆ.
ಕೊಂಡಟ್ಟಿಯಲ್ಲಿರುವ ಆಕೆಯ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ. ಆಕೆಯ ಪ್ರಿಯಕರ ಬಶೀರ್ ವಿಷ ಸೇವಿಸಿ, ಅಸ್ವಸ್ತ ಸ್ಥಿತಿಯಲ್ಲಿ ಬಿದ್ದಿದ್ದ. ಆತನನ್ನು ಕೊಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಪ್ರಾಥಮಿಕ ತನಿಖಾ ವರದಿಯ ಪ್ರಕಾರ ಸೌಜತ್ಳನ್ನು ಕೊಲೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಅಂದಹಾಗೆ ಸೌಜತ್, 2018ರಲ್ಲಿ ತನ್ನ ಗಂಡ ಸಾವದ್ನನ್ನು ಕೊಲೆ ಮಾಡಿದ್ದಳು. ತನ್ನ ಪ್ರಿಯಕರನ ಜೊತೆ ಜೀವಿಸಲು ಗಂಡನನ್ನು ಕೊಲೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಳು. ಕೊಲೆಯಾದ ಸಾವದ್ ಓರ್ವ ಮೀನುಗಾರನಾಗಿದ್ದ. ಪ್ರಿಯಕರ ಬಶೀರ್ ನೆರವಿನಿಂದ ಗಂಡನ ತಲೆಗೆ ಬಲವಾದ ಆಯುಧದಿಂದ ಹೊಡೆದು, ಗಂಟಲು ಸೀಳಿ ಹತ್ಯೆ ಮಾಡಿದ್ದರು.
ಯಾರೊಂದಿಗೆ ಉಳಿದ ಜೀವನ ಸಾಗಿಸಬೇಕೆಂದು ಬಯಸಿ ಗಂಡನನ್ನು ಕೊಂದಿದ್ದಳೋ ಆಕೆಯೇ ಇದೀಗ ತನ್ನ ಪ್ರಿಯಕರನ ಕೈಯಿಂದ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಸದ್ಯ ಆಕೆಯ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.