ನವದೆಹಲಿ: 'ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗುವ ಹೊಸ ಅರ್ಜಿಗಳು ಸಂಬಂಧಪಟ್ಟ ನ್ಯಾಯಪೀಠಗಳ ಮುಂದೆ ಸ್ವಯಂಚಾಲಿತವಾಗಿಯೇ ವಿಚಾರಣಾ ಪಟ್ಟಿಗೆ ಸೇರ್ಪಡೆಯಾಗಲಿವೆ' ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಗುರುವಾರ ಹೇಳಿದ್ದಾರೆ.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಜೆ.ಬಿ.ಪಾರ್ದಿವಾಲಾ ಅವರನ್ನು ಒಳಗೊಂಡ ನ್ಯಾಯಪೀಠದ ನೇತೃತ್ವ ವಹಿಸಿದ್ದ ಅವರು, 'ಈ ಕುರಿತು ರಜಿಸ್ಟ್ರಾರ್ ಅವರಿಗೆ ನಿರ್ದೇಶನ ನೀಡಿದ್ದೇನೆ' ಎಂದು ಹೇಳಿದರು.
'ಸೋಮವಾರ, ಮಂಗಳವಾರ ಹಾಗೂ ಬುಧವಾರದಂದು ಸಲ್ಲಿಕೆಯಾಗಿರುವ ಅರ್ಜಿಗಳು, ಬರುವ ಸೋಮವಾರದಿಂದಲೇ ವಿಚಾರಣೆ ಪಟ್ಟಿಗೆ ಸೇರಲಿವೆ ಹಾಗೂ ಈ ಪ್ರಕ್ರಿಯೆ ಸ್ವಯಂಚಾಲಿತವಾಗಿಯೇ ನಡೆಯಲಿದೆ' ಎಂದರು.
'ಯಾವುದೇ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕು ಎಂದಿದ್ದರೆ, ಆ ಬಗ್ಗೆ ಸೂಕ್ತ ಸೂಚನೆ/ಮಾಹಿತಿಯನ್ನು ನೀಡಲಾಗುವುದು. ಇಲ್ಲದಿದ್ದರೆ, ಈಗಾಗಲೇ ನೀಡಿರುವ ನಿರ್ದೇಶನದಂತೆಯೇ ವಿಚಾರಣೆ ಪಟ್ಟಿಗೆ ಅರ್ಜಿಗಳನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯಲಿದೆ' ಎಂದು ಅವರು ವಕೀಲರಿಗೆ ತಿಳಿಸಿದರು.