ನವದೆಹಲಿ: 'ಒಂದು ಬಾರಿಯ ಇತ್ಯರ್ಥ (ಒಟಿಎಸ್) ಯೋಜನೆಯಡಿ ಸಾಲ ಮರುಪಾವತಿ ಮಾಡಲು ಸಾಲಗಾರ ಹೆಚ್ಚುವರಿ ಕಾಲಾವಕಾಶ ಪಡೆಯುವಂತಿಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ವರ್ಷದ ಮಾರ್ಚ್‌ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಸಿದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ (ಎಸ್‌ಬಿಐ) ಸಾಲ ಪಡೆದಿದ್ದ ಕಂಪನಿಯೊಂದಕ್ಕೆ ಬಡ್ಡಿ ಸಮೇತ ಬಾಕಿ ಹಣ ಪಾವತಿಸಲು ಹೆಚ್ಚುವರಿಯಾಗಿ ಆರು ವಾರಗಳ ಕಾಲಾವಕಾಶ ಮಂಜೂರು ಮಾಡಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಎಸ್‌ಬಿಐ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ರದ್ದುಪಡಿಸಿದೆ.
'ನ್ಯಾಯಾಲಯ ಹೆಚ್ಚುವರಿ ಕಾಲಾವಕಾಶ ಮಂಜೂರು ಮಾಡಿರುವುದರಿಂದ ಒಪ್ಪಂದ ನವೀಕರಿಸಬೇಕಾಗುತ್ತದೆ. ಇದಕ್ಕೆ ಸಂವಿಧಾನದ 226ನೇ ವಿಧಿಯಲ್ಲಿ ಅವಕಾಶವಿಲ್ಲ' ಎಂದು ನ್ಯಾಯಪೀಠ ಹೇಳಿದೆ.
ಒಟಿಎಸ್ ಯೋಜನೆಯಡಿ ಸಾಲ ಪಡೆಯಲು ಒಪ್ಪಿದ್ದ ಕಂಪನಿಗೆ 2017ರ ಮೇ 21ರಂದು ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಅದರನ್ವಯ ಕಂಪನಿಯು ಅದೇ ವರ್ಷದ ಡಿಸೆಂಬರ್ 21ಕ್ಕೆ ಸಾಲದ ಶೇ 25ರಷ್ಟು ಮೊತ್ತವನ್ನು ಪಾವತಿಸಬೇಕಿತ್ತು. ನಂತರದ ಆರು ತಿಂಗಳೊಳಗೆ ಬಾಕಿ ಮೊತ್ತವನ್ನು ಬಡ್ಡಿ ಸಮೇತ (₹2.52 ಕೋಟಿ) ಪಾವತಿ ಮಾಡಬೇಕಿತ್ತು. ಆದರೆ ಕಂಪನಿ ನಿಗದಿತ ಅವಧಿಗಿಂತಲೂ 8 ರಿಂದ 9 ತಿಂಗಳು ಹೆಚ್ಚು ಕಾಲಾವಕಾಶ ಕೋರಿತ್ತು. ಕಂಪನಿಯ ಮನವಿಯನ್ನು ಬ್ಯಾಂಕ್ ತಳ್ಳಿ ಹಾಕಿತ್ತು. ಹೀಗಾಗಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.