ಶಹಜಹಾನ್‌ಪುರ : ಇಲ್ಲಿಯ ಬಿಜೆಪಿ ಸಂಸದ ಅರುಣ್ ಕುಮಾರ್ ಸಾಗರ್ ಅವರನ್ನು ಸಂಸದರ/ಶಾಸಕರ ವಿಶೇಷ ನ್ಯಾಯಾಲಯವೊಂದು ಸೋಮವಾರ 'ತಲೆಮರಿಸಿಕೊಂಡಿರುವ ವ್ಯಕ್ತಿ' ಎಂದು ಘೋಷಿಸಿದೆ.
2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಆಗಿದ್ದ ಅರುಣ್ ಕುಮಾರ್ ಅವರಿಂದ ಚುನಾವಣಾ ಪ್ರಚಾರ ಸಾಮಾಗ್ರಿಗಳನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರು ವಶಪಡಿಸಿಕೊಂಡಿದ್ದರು.
ಬಳಿಕ ಈ ಕುರಿತು ಮೊಕದ್ದಮೆ ದಾಖಲಾಗಿತ್ತು. ಅನುಮತಿ ಪಡೆಯದೇ ಗೋಡೆಗಳ ಮೇಲೆ ಚುನಾವಣಾ ಘೋಷಣೆಗಳನ್ನು ಬರೆದಿದ್ದ ಆರೋಪದ ಮೇಲೂ ಮೊಕದ್ದಮೆ ದಾಖಲಿಸಲಾಗಿತ್ತು. ಈ ಮೊಕದ್ದಮೆಗಳ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುವಂತೆ ಹಲವು ಬಾರಿ ಅವರಿಗೆ ಸಮನ್ಸ್ ನೀಡಲಾಗಿದ್ದರ ಹೊರತಾಗಿಯೂ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಬಳಿಕ ಅವರಿಗೆ ಜಾಮೀನುರಹಿತ ವಾರಂಟ್ ನೀಡಲಾಗಿತ್ತು ಎಂದು ಸರ್ಕಾರಿ ವಕೀಲೆ ನೀಲಿಮಾ ಸಕ್ಸೇನಾ ಅವರು ತಿಳಿಸಿದ್ದಾರೆ.
ಅರುಣ್ ಕುಮಾರ್ ಅವರನ್ನು 'ತಲೆಮರೆಸಿಕೊಂಡಿರುವ ವ್ಯಕ್ತಿ' ಎಂದು ಘೋಷಿಸಿರುವ ನ್ಯಾಯಾಧೀಶೆ ಆಸ್ಮಾ ಸುಲ್ತಾನಾ ಅವರು, ಆದೇಶದ ಪ್ರತಿಗಳನ್ನು ಅರುಣ್ ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲು ಆದೇಶಿಸಿದ್ದಾರೆ.