ನವದೆಹಲಿ : ನವಜಾತ ಶಿಶುವನ್ನು ಬಲಿ ನೀಡಿ ಮೃತಪಟ್ಟ ತಂದೆಯನ್ನು ಬದುಕಿಸುವ ಸಲುವಾಗಿ ಎರಡು ತಿಂಗಳ ಮಗುವನ್ನು ಅಪಹರಿಸಿದ್ದ 25 ವರ್ಷ ವಯಸ್ಸಿನ ಮಹಿಳೆಯನ್ನು ನೈಋತ್ಯ ದೆಹಲಿಯಲ್ಲಿ ಬಂಧಿಸಲಾಗಿದೆ. ಮಗುವನ್ನು ಸುರಕ್ಷಿತವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಅಪರಿಚಿತ ಮಹಿಳೆಯೊಬ್ಬಳು ಗಂಡು ಮಗುವನ್ನು ಅಪಹರಿಸಿದ್ದಾಳೆ ಎಂದು ಗುರುವಾರ 4 ಗಂಟೆಗೆ ಗಾರ್ಹಿ ಪ್ರದೇಶದಿಂದ ಮಾಹಿತಿ ದೊರಕಿತು. ಅಮರ್ ಕಾಲೊನಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರದೀಪ್ ರಾವತ್ ನೇತೃತ್ವದ ತಂಡವು ಕೂಡಲೇ ತನಿಖೆ ಕೈಗೆತ್ತಿಕೊಂಡಿತು. ಕೋತ್ಲಾ ಮುಬಾರಕ್‌ಪುರ್‌ರ ಆರ್ಯ ಸಮಾಜ ಮಂದಿರದ ಬಳಿ ಆರೋಪಿ ಶ್ವೇತಾಳನ್ನು ಬಂಧಿಸಲಾಯಿತು. ಆರೋಪಿಯು ಈ ಮೊದಲು ದರೋಡೆ ಮತ್ತು ಕಳ್ಳತನದಂಥ ಎರಡು ಮೊಕದ್ದಮೆಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಸಫ್ದಜ್‌ಜಂಗ್ ಆಸ್ಪತ್ರೆಯಲ್ಲಿ ಮೊದಲ ಬಾರಿ ಭೇಟಿ ಆಗಿದ್ದಾಗಿ ಮಗುವಿನ ತಾಯಿ ಹೇಳಿದ್ದಾರೆ. ಮಹಿಳೆಯು ತಾನು ಸರ್ಕಾರೇತರ ಸಂಸ್ಥೆ 'ಜಚ್ಚಾ-ಬಚ್ಚಾ ಕೇರ್'ನ ಸದಸ್ಯೆ. ಸಂಸ್ಥೆ ವತಿಯಿಂದ ತಾಯಿ, ಮಗುವಿಗೆ ಉಚಿತ ತಪಾಸಣೆ ಮತ್ತು ಔಷಧ ನೀಡುವುದಾಗಿ ನಂಬಿಸಿದ್ದರು. ಬಳಿಕ ಮಗುವಿನ ತಪಾಸಣೆಗಾಗಿ ಮನೆಗೂ ಬಂದಿದ್ದಳು. ಗುರುವಾರ ಆಕೆ ಬಂದಾಗ ಮಗುವನ್ನು ಸುತ್ತಾಡಲು ಕರೆದುಕೊಂಡು ಹೋಗಿಬರುವುದಾಗಿ ಹೇಳಿದಳು. ಮಗುವಿನ ಜೊತೆ ತನ್ನ ಸೋದರ ಸಂಬಂಧಿ ರಿತೂಳನ್ನೂ ಶ್ವೇತಾ ಜೊತೆ ಕಳಿಸಿದ್ದೆ ಎಂದು ಮಗುವಿನ ತಾಯಿ ಹೇಳಿದ್ದಾರೆ.
ಮಗು ಮತ್ತು ರಿತೂ ಇಬ್ಬರನ್ನು 'ನೀಮ್ ಚೌಕ'ಕ್ಕೆ ಕರೆದುಕೊಂಡು ಬಂದ ಶ್ವೇತಾ, ಅವರಿಬ್ಬರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡಳು. ಬಳಿಕ ರಿತೂಳಿಗೆ ತಂಪು ಪಾನೀಯ ಕುಡಿಯಲು ನೀಡಿದಳು. ಪಾನೀಯ ಕುಡಿದ ಬಳಿಕ ರಿತೂ ಪ್ರಜ್ಞೆ ತಪ್ಪಿ ಬಿದ್ದಳು. ಗಾಜಿಯಾಬಾದ್‌ನಲ್ಲಿ ರಿತೂಳನ್ನು ಎಸೆದು ಆಕೆ ಮಗುವನ್ನು ಅಪಹರಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವ ಶ್ವೇತಾ, 'ಇತ್ತೀಚೆಗೆ ನನ್ನ ತಂದೆ ಮೃತಪಟ್ಟಿದ್ದರು. ಸಮಾನ ಲಿಂಗದ ನವಜಾತ ಶಿಶುವನ್ನು ಬಲಿ ನೀಡಿದರೆ ಸತ್ತವರು ಬದುಕಿ ಬರುತ್ತಾರೆ ಎಂಬ ವಿಷಯ ಅವರ ಅಂತ್ಯ ಸಂಸ್ಕಾರದ ವೇಳೆ ತಿಳಿಯಿತು. ಹಾಗಾಗಿ ಮಗುವನ್ನು ಅಪಹರಿಸಿದೆ' ಎಂದಿದ್ದಾಳೆ ಎಂದು ಅವರು ತಿಳಿಸಿದ್ದಾರೆ.