HEALTH TIPS

ಭಾರತದಲ್ಲಿ ಸ್ಟಾರ್ಟ್​ಅಪ್​ ಪರಿಸರ ವ್ಯವಸ್ಥೆ ನಿರ್ಮಿಸುವಲ್ಲಿ ಬೆಂಗಳೂರಿನದ್ದು ಮಹತ್ತರ ಪಾತ್ರ: ಪ್ರಧಾನಿ ಮೋದಿ

 

             ಬೆಂಗಳೂರು: ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕದ ಪ್ರಗತಿ, ಬೆಳವಣಿಗೆ ಶಕ್ತಿ ವೇಗವಾಗಿದೆ, ಡಬಲ್ ಎಂಜಿನ್ ಸರ್ಕಾರದ ತಾಕತ್ತಿನಿಂದ ನಡೆಯುತ್ತಿದೆ. ಕರ್ನಾಟಕದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈಗ ಕರ್ನಾಟಕದಲ್ಲಿ ಕೇವಲ ಐಟಿ ಮಾತ್ರವೇ ಅಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆ ಮಾಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

              ಅವರು ಇಂದು ದೇವನಹಳ್ಳಿಯಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರಗತಿಯ ಪ್ರತಿಮೆಯನ್ನು ಅನಾವರಣಗೊಳಿಸಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಸೇನೆಗೆ ಪೂರೈಕೆಯಾಗುತ್ತಿರುವ ವಿಮಾನಗಳಲ್ಲಿ ಕರ್ನಾಟಕ ಸಿಂಹಪಾಲು ಪಡೆದಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಫಾರ್ಚೂನ್ 400 ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ ಎಂದರು. 

          ಕರ್ನಾಟಕದ ಸಮಸ್ತ ಜನರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು ಕರ್ನಾಟಕದಿಂದ ದೇಶಕ್ಕೆ ಹಲವು ಕೊಡುಗೆ ಸಿಕ್ಕಿದೆ. ಕನ್ನಡ ನೆಲದ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಇಂದು ಮೊದಲ ಬಾರಿಗೆ ಮೇಡ್​ ಇನ್ ಇಂಡಿಯಾ ವಂದೇ ಭಾರತ್ ರೈಲು ಸಿಕ್ಕಿದೆ. ದೇಶದ ಸ್ಟಾರ್ಟ್​ ಅಪ್ ಕ್ಯಾಪಿಟಲ್ ಬೆಂಗಳೂರನ್ನು ಚೆನ್ನೈ ಹಾಗೂ ಮೈಸೂರಿನೊಂದಿಗೆ ಜೋಡಿಸುತ್ತದೆ ಎಂದು ಹೇಳಿದರು.

             ನಾವು ಕರ್ನಾಟಕಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಕೆಂಪೇಗೌಡರ ಚಿಂತನೆಗಳು ಭವಿಷ್ಯದ ಕರ್ನಾಟಕ, ಭಾರತ ಹೇಗಿರಬೇಕು ಎಂಬ ಬಗ್ಗೆ ಪ್ರೇರಣೆ ನೀಡುತ್ತದೆ. ಭಾರತದ ಭವಿಷ್ಯಕ್ಕೆ ಸ್ಟಾರ್ಟ್​ಅಪ್​ ಮುಖ್ಯ. ಅದಕ್ಕೆ ಬೆಂಗಳೂರು ಬಹುದೊಡ್ಡ ಕೊಡುಗೆ ನೀಡುತ್ತದೆ. ದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗುತ್ತಿದೆ.

              ಸ್ಟಾರ್ಟ್​ಅಪ್​ ಎನ್ನುವುದು ಒಂದು ಕಂಪನಿಯಿಂದ ಆಗುವುದಿಲ್ಲ. ಅದೊಂದು ಮನೋಭಾವ, ಸಮಗ್ರ ಪ್ರಯತ್ನದ ಫಲ. ಬೆಂಗಳೂರು ಭಾರತದ ಭವಿಷ್ಯಕ್ಕೆ ಅತ್ಯಂತ ಮುಖ್ಯ ನಗರ. ಬೆಂಗಳೂರು ಭಾರತದ ಯುವಶಕ್ತಿಯ ಪ್ರತೀಕವಾಗಿದೆ. ವಂದೇ ಭಾರತ್ ಎಕ್ಸ್​ಪ್ರೆಸ್​ ಕೇವಲ ಒಂದು ರೈಲು ಮಾತ್ರವೇ ಅಲ್ಲ. ಅದು ಹೊಸ ಭಾರತದ ಹೊಸ ಮೈಲಿಗಲ್ಲು. ಮುಂದಿನ ದಿನಗಳಲ್ಲಿ ಭಾರತದ ರೈಲುಗಲು ಹೇಗಿರಲಿವೆ ಎಂಬುದರ ಒಂದು ಝಲಕ್ ಅಷ್ಟೇ ಎಂದರು.

               ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳ ಹಿಂದೆ ಭಾರತದಲ್ಲಿ ಬೆರಳೆಣಿಕೆಯಷ್ಟು ವಿಮಾನ ನಿಲ್ದಾಣಗಳಿದ್ದವು. ಆದರೆ ಇಂದು ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿದೆ. ವಿಮಾನ ನಿಲ್ದಾಣಗಳು ದೇಶದ ಪ್ರಗತಿಯ ದ್ಯೋತಕ.ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರ ಪರಿಕಲ್ಪನೆಯಂತೆಯೇ ಅಭಿವೃದ್ಧಿಪಡಿಸುತ್ತೇವೆ. ಕೆಂಪೇಗೌಡರು ಬೆಂಗಳೂರನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಂಸ್ಕೃತಿವಕಾಗಿಯೂ ಸದೃಢಗೊಳಿಸಬೇಕು ಎಂದು ಚಿಂತಿಸಿದ್ದರು. ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ. ಬೆಂಗಳೂರಿನ ಪರಂಪರೆ ಸಂರಕ್ಷಿಸುವ ಜೊತೆಗೆ ಆಧುನಿಕ ಸೌಲಭ್ಯಗಳನ್ನೂ ಒದಗಿಸಬೇಕು. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

                      ಇಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ನನ್ನ ಸೌಭಾಗ್ಯ: ಇಂದು ಕರ್ನಾಟಕದ ಇಬ್ಬರು ಮಹನೀಯರ ಜನ್ಮಜಯಂತಿ, ಕನಕದಾಸ ಮತ್ತು ಒನಕೆ ಓಬವ್ವ ಅವರ ಜನ್ಮಜಯಂತಿಯಾಗಿದ್ದು ಈ ಶುಭ ಗಳಿಗೆಯಲ್ಲಿ ವಿಶ್ವದಲ್ಲಿ ಮನ್ನಣೆ ಗಳಿಸಿರುವ ಬೆಂಗಳೂರಿನಲ್ಲಿರುವುದು ನನಗೆ ಅತ್ಯಂತ ಸಂತಸ ತಂದಿದೆ ಎಂದರು. 

               ಕೆಂಪೇಗೌಡರ ಪ್ರತಿಮೆ ಮತ್ತು ಜಲಾಭಿಷೇಕಕ್ಕೆ ನನಗೆ ಅವಕಾಶ ಸಿಕ್ಕಿದ್ದು ಪುಣ್ಯವಾಗಿದೆ. ಕರ್ನಾಟಕಕ್ಕೆ ವಂದೇ ಭಾರತ್ ರೈಲು ಸಿಕ್ಕಿದೆ. ಅದು ಸ್ವದೇಶಿ ನಿರ್ಮಿತ ರೈಲಾಗಿದೆ. ಕರ್ನಾಟಕಕ್ಕೆ ಮೇಡ್ ಇನ್ ಇಂಡಿಯಾ ರೈಲು ಸಿಕ್ಕಿದೆ. ಇದು ಸ್ಟಾರ್ಟ್ ಅಪ್ ನ್ನು ಪ್ರತಿನಿಧಿಸುತ್ತದೆ. ಇನ್ನು ಭಾರತ್ ಗೌರವ್ ದರ್ಶನ ರೈಲು ಈ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತದೆ ಎಂದರು.

               ಭಾರತ ಇನ್ನು ಕುಂಟುವುದಿಲ್ಲ, ಅಭಿವೃದ್ಧಿ ಪಥದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆಯ ನುಡಿಗಳನ್ನಾಡಿದ್ದಾರೆ. ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಇನ್ನು ಕುಂಟುವುದಿಲ್ಲ. ಅತ್ಯಂತ ವೇಗವಾಗಿ ಓಡುತ್ತದೆ.

          ಭಾರತದಾದ್ಯಂತ ವಂದೇ ಭಾರತ್ ರೈಲು, ವಿಸ್ಟರ್​ಡೊಮ್ ಕೋಚ್ ಗಳು ಇರುತ್ತವೆ. ಸಾರಿಗೆಯನ್ನು ನಾವು ಸುಧಾರಿಸುತ್ತೇವೆ. ಸಮಯ ಉಳಿಸುತ್ತೇವೆ. ಬ್ರಾಡ್​ಗೇಜ್ ಪರಿವರ್ತನೆಗೆ ವೇಗ ಕೊಟ್ಟಿದ್ದೇವೆ. ಹಲವು ಹೊಸ ಪ್ರದೇಶಗಳಿಗೆ ರೈಲು ಸಂಪರ್ಕ ಸಿಕ್ಕಿದೆ. ನಮ್ಮ ರೈಲು ನಿಲ್ದಾನಗಳು ಆಧುನೀಕರಣಗೊಂಡಿವೆ.

         ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೇರೆಯೇ ಅನುಭವ ಕೊಡುತ್ತದೆ. ದೇಶದ ಇತರ ರೈಲು ನಿಲ್ದಾಣಗಳನ್ನು ಇದೇ ರೀತಿ ಆಧುನೀಕರಣ ಮಾಡುತ್ತೇವೆ. ಬೆಂಗಳೂರು ನಗರ, ಯಶವಂತಪುರ ನಿಲ್ದಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.

           ವಿವಿಧ ಬಗೆಯ ಸಾರಿಗೆ ವ್ಯವಸ್ಥೆಯನ್ನು ನಾವು ಒಗ್ಗೂಡಿಸಿದ್ದೇವೆ. ಸಾರಿಗೆ ಖರ್ಚು ಕಡಿಮೆ ಮಾಡಲೆಂದು ವಿಶೇಷ ಸಾರಿಗೆ ನೀತಿ ರೂಪಿಸಿದ್ದೇವೆ. ದೇಶದ ಸಾಮಾಜಿಕ ಮೂಲ ಸೌಕರ್ಯಗಳನ್ನೂ ಉತ್ತಮಪಡಿಸುತ್ತಿದ್ದೇವೆ. ದೇಶದಲ್ಲಿ ಕೋಟ್ಯಂತರ ಹೊಸ ಮನೆ ನಿರ್ಮಿಸಿ ಹಂಚಿದ್ದೇವೆ. ಕರ್ನಾಟಕಕ್ಕೂ ಸಾಕಷ್ಟು ಸೌಕರ್ಯ ಸಿಕ್ಕಿದೆ. ಹಲವು ಮನೆಗಳಿಗೆ ಮೊದಲ ಬಾರಿಗೆ ನಲ್ಲಿಯಲ್ಲಿ ನೀರು ಬಂದಿದೆ. ಸಮಗ್ರ ಅಭಿವೃದ್ಧಿಗೆ ನಾವು ಗಮನ ಹರಿಸುತ್ತಿದ್ದೇವೆ. ಸಣ್ಣ ರೈತರ ಅನುಕೂಲಕ್ಕೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಆಹಾರ ಧಾನ್ಯಗಳು ಸಕಾಲಕ್ಕೆ ಮಾರುಕಟ್ಟೆ ತಲುಪಲು ಅನುಕೂಲ ಕಲ್ಪಿಸಿದ್ದೇವೆ. ಎಲ್ಲರೂ ಜೊತೆಗೂಡಿದರೆ ದೇಶ ಸದೃಢವಾಗುತ್ತದೆ. ಹೀಗಾಗಿ ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲು ಎಲ್ಲರನ್ನೂ ಭಾಗಿದಾರರಾಗಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

        ಕನಕದಾಸರು ಒಂದು ಕಡೆಯಿಂದ ಕೃಷ್ಣನ ಭಕ್ತಿಯ ಮಾರ್ಗ ತೋರಿದರು. ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಕಿವಿಮಾತು ಹೇಳಿದರು. ಇಂದು ಜಗತ್ತಿನಲ್ಲಿ ಕಿರುಧಾನ್ಯದ ಬಗ್ಗೆ ಮಾತು ಕೇಳಿಬರುತ್ತಿದೆ. ‘ರಾಮಧಾನ್ಯ ಚರಿತ್ರೆ’ ಮೂಲಕ ಕಿರುಧಾನ್ಯವಾದ ರಾಗಿಯ ಉದಾಹರಣೆ ನೀಡಿ ಸಾಮಾಜಿಕ ಸಮಾನತೆಯ ಸಂದೇಶ ನೀಡಿದರು.

              ಬೆಂಗಳೂರು ಸ್ಟಾರ್ಟ್ ಅಪ್ ಗಳಿಗೆ ಪ್ರತಿನಿಧಿ: ಬೆಂಗಳೂರು 'ಸ್ಟಾರ್ಟ್-ಅಪ್' ಮನೋಭಾವವನ್ನು ಪ್ರತಿನಿಧಿಸುತ್ತದೆ. ಪ್ರಪಂಚದಾದ್ಯಂತ, ಭಾರತವು ತನ್ನ ಸ್ಟಾರ್ಟ್‌ಅಪ್‌ಗಳಿಗೆ ಹೆಸರುವಾಸಿಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯಿಂದ ಕರ್ನಾಟಕಕ್ಕೂ ಲಾಭವಾಗಿದೆ, 8 ವರ್ಷಗಳ ಹಿಂದೆ ಡಿಜಿಟಲ್ ಪೇಮೆಂಟ್ ಬಗ್ಗೆ ಕಲ್ಪನೆಯೇ ಇರಲಿಲ್ಲ. ಇಂದು ಪ್ಲಾಸ್ಟಿಕ್ ಮನಿ ವಹಿವಾಟು, ಡಿಜಿಟಲ್ ಪೇಮೆಂಟ್ ತಂತ್ರಜ್ಞಾನದಲ್ಲಿ ಬಹಳಷ್ಟು ಸಾಧಿಸಿದ್ದೇವೆ ಎಂದರು.

               ಭಾರತದ ಅಭಿವೃದ್ಧಿಯಲ್ಲಿ ಸಂಪರ್ಕವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಾಯು ಸಂಪರ್ಕ ಮತ್ತು ಹೊಸ ವಿಮಾನ ನಿಲ್ದಾಣಗಳನ್ನು ರಚಿಸುವುದು ಸಮಯದ ಅಗತ್ಯವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಸೌಲಭ್ಯಗಳನ್ನು ಹೆಚ್ಚಿಸಲಿದೆ. ಬೆಳವಣಿಗೆಯನ್ನು ಸಾಧಿಸಲು ನಾವು ಭೌತಿಕ ಮತ್ತು ಸಾಮಾಜಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries