ನವದೆಹಲಿ: ಶಾಸಕರ ಬಂಡಾಯದಿಂದಾಗಿ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲು ವಿಫಲವಾದ ಕಾರಣ ರಾಜಸ್ಥಾನದ ಉಸ್ತುವಾರಿಯಾಗಿ ಮುಂದುವರಿಯಲು ಹಿರಿಯ ಕಾಂಗ್ರೆಸ್ ನಾಯಕ ಅಜಯ್ ಮಾಕೆನ್ ನಿರಾಕರಿಸಿದ್ದಾರೆ.
ನ.8ರಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರಿಗೆ ಪತ್ರ ಬರೆದಿರುವ ಅಜಯ್, ಸೆ.25 ರಂದು ನಡೆದ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿ, ತಮ್ಮ ಸ್ಥಾನಕ್ಕೆ ಮತ್ತೊಬ್ಬರನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಡಿಸೆಂಬರ್ ಮೊದಲ ವಾರ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೊ ಯಾತ್ರೆ ರಾಜಸ್ಥಾನಕ್ಕೆ ಆಗಮಿಸುತ್ತಿರುವುದು ಹಾಗೂ ಡಿ.4ರಂದು ಉಪಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸಾಧ್ಯವಾದಷ್ಟು ಬೇಗ ಹೊಸ ಉಸ್ತುವಾರಿಯನ್ನು ನೇಮಿಸಬೇಕು' ಎಂದು ಮಾಕೆನ್ ಪತ್ರದಲ್ಲಿ ತಿಳಿಸಿದ್ದಾರೆ. ಅಲ್ಲದೆ ತಾವು ಯಾವಾಗಲೂ ರಾಹುಲ್ ಗಾಂಧಿ ಅನುಯಾಯಿ ಆಗಿ ಇರುವುದಾಗಿಯೂ ಹೇಳಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆ ನಡೆಸಲು ಮಾಕೆನ್ ಮತ್ತು ಖರ್ಗೆ ಅವರು ಕೇಂದ್ರ ವೀಕ್ಷಕರಾಗಿ ಜೈಪುರಕ್ಕೆ ತೆರಳಿದ್ದರು. ಆದರೆ, ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಪರವಾಗಿ ಎರಡೂ ಬಣಗಳ ಆರೋಪ ಮತ್ತು ಪ್ರತ್ಯಾರೋಪ, ಪ್ರತ್ಯೇಕ ಸಭೆಗಳಿಂದಾಗಿ ಶಾಸಕಾಂಗ ಪಕ್ಷದ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಮುಖ್ಯಮಂತ್ರಿಗೆ ನಿಷ್ಠರಾಗಿರುವ ಕೆಲ ಶಾಸಕರು ರಾಜ್ಯದ ಸಚಿವ ಶಾಂತಿ ಧರಿವಾಲ್ ಅವರ ನಿವಾಸದಲ್ಲಿ ಪ್ರತ್ಯೇಕ ಸಭೆ ನಡೆಸುವ ಮೂಲಕ ಗೆಹಲೋತ್ ಉತ್ತರಾಧಿಕಾರಿಯನ್ನಾಗಿ ಪೈಲಟ್ ಅವರನ್ನು ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆ ಸಂದರ್ಭದಲ್ಲಿ ರಾಜಸ್ಥಾನದಲ್ಲಿ ಹೊಸ ನಾಯಕನ ಆಯ್ಕೆಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ನೀಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸುವುದಕ್ಕಾಗಿ ಶಾಸಕರ ಸಭೆ ಕರೆಯಲು ಮಾಕೆನ್ ವಿಫಲರಾಗಿದ್ದರು. ನಿರ್ಣಯ ಅಂಗೀಕರಿಸಲು ಸಾಧ್ಯವಾಗದ ಕಾರಣ ಗೆಹಲೋತ್ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಪಕ್ಷದ ಆಗಿನ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದರು.