ನವದೆಹಲಿ: ಬ್ಯೂರೊ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (BIS) ನ.25ರಿಂದ ಜಾರಿಗೊಳಿಸಲಿರುವ ನಿಯಮಗಳ ಪ್ರಕಾರ ಇ-ಕಾಮರ್ಸ್ (E-commerce) ತಾಣಗಳು ತಮ್ಮ ಉತ್ಪನ್ನಗಳು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಂದ ಪಾವತಿ ವಿಮರ್ಶೆಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಗೊಳಿಸಬೇಕಾಗುತ್ತದೆ.
ನಕಲಿ ಮತ್ತು ಮೋಸಗೊಳಿಸುವ ವಿಮರ್ಶೆಗಳಿಂದ ಗ್ರಾಹಕರನ್ನು ರಕ್ಷಿಸುವುದು ಈ ನಿಯಮಗಳ ಉದ್ದೇಶವಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ರೋಹಿತಕುಮಾರ ಸಿಂಗ್ ತಿಳಿಸಿದರು.
ವಿಮರ್ಶೆಗಳು ದಾರಿ ತಪ್ಪಿಸುವಂತಿರಬಾರದು ಮತ್ತು ವಿಮರ್ಶಕರ ಗುರುತುಗಳನ್ನು ಅವರ ಅನುಮತಿಯಿಲ್ಲದೆ ಬಹಿರಂಗಗೊಳಿಸುವಂತಿಲ್ಲ ಎಂದು ಹೇಳಿದ ಅವರು,ಇ-ಕಾಮರ್ಸ್ ತಾಣಗಳು ವಿಮರ್ಶೆಗೆ ಹಣ ಪಾವತಿಸಿದ್ದರೆ ಅಥವಾ ವಿಮರ್ಶೆಯನ್ನು ಬರೆದಿದ್ದಕ್ಕಾಗಿ ವ್ಯಕ್ತಿಗೆ ಪುರಸ್ಕಾರವನ್ನು ನೀಡಿದ್ದರೆ ಅದನ್ನು ಖರೀದಿಸಿದ ವಿಮರ್ಶೆ ಎಂದು ಸ್ಪಷ್ಟವಾಗಿ ಗುರುತಿಸಬೇಕು ಎಂದರು.
ಆನ್ಲೈನ್ನಲ್ಲಿ ಗ್ರಾಹಕರ ವಿಮರ್ಶೆಗಳನ್ನು ಪ್ರಕಟಿಸುವ ಎಲ್ಲ ಸಂಸ್ಥೆಗಳಿಗೆ ಐಎಸ್ 19000:2022 ಮಾನದಂಡವು ಅನ್ವಯಿಸುತ್ತದೆ. ತಮ್ಮ ಗ್ರಾಹಕರಿಂದ ವಿಮರ್ಶೆಗಳನ್ನು ಸಂಗ್ರಹಿಸುವ ಉತ್ಪನ್ನಗಳು ಮತ್ತು ಸೇವೆಗಳ ಪೂರೈಕೆದಾರರು,ಅವು ಒಪ್ಪಂದ ಮಾಡಿಕೊಂಡಿರುವ ಥರ್ಡ್ ಪಾರ್ಟಿಗಳು ಅಥವಾ ಸ್ವತಂತ್ರ ಥರ್ಡ್ ಪಾರ್ಟಿಗಳು ಇವುಗಳಲ್ಲಿ ಸೇರುತ್ತವೆ.
'ಬಹುಶಃ ನಾವು ಆನ್ಲೈನ್ ವಿಮರ್ಶೆಗಳಿಗೆ ಮಾನದಂಡವನ್ನು ರೂಪಿಸಿದ ವಿಶ್ವದ ಮೊದಲ ದೇಶವಾಗಿದ್ದೇವೆ 'ಎಂದು ಸಿಂಗ್ ಹೇಳಿದರು.
ಸರಕಾರವು ಮೊದಲು ನಿಯಮಗಳ ಸ್ವಯಂಪ್ರೇರಿತ ಪಾಲನೆಗಾಗಿ ವ್ಯವಸ್ಥೆಯೊಂದನ್ನು
ಸ್ಥಾಪಿಸಲಿದೆ ಮತ್ತು ಪಿಡುಗು ಬೆಳೆಯುತ್ತಲೇ ಇದ್ದರೆ ಅದನ್ನು ಕಡ್ಡಾಯಗೊಳಿಸಲಿದೆ
ಎಂದರು.
ಆನ್ಲೈನ್ನಲ್ಲಿ ಪೋಸ್ಟ್ ಮಾಡಲಾದ ವಿಮರ್ಶೆಗಳು ಖರೀದಿ ನಿರ್ಧಾರಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈಗಾಗಲೇ ಉತ್ಪನ್ನಗಳು ಅಥವಾ ಸೇವೆಗಳನ್ನು ಖರೀದಿಸಿರುವ ಬಳಕೆದಾರರ ಅಭಿಪ್ರಾಯ ಮತ್ತು ಅನುಭವವನ್ನು ತಿಳಿದುಕೊಳ್ಳಲು ಗ್ರಾಹಕರು ಇ-ಕಾಮರ್ಸ್ ತಾಣಗಳಲ್ಲಿ ಪೋಸ್ಟ್ ಮಾಡಲಾದ ವಿಮರ್ಶೆಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿರುತ್ತಾರೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಇ-ಕಾಮರ್ಸ್ (E-commerce) ತಾಣಗಳಲ್ಲಿ ಉತ್ಪನ್ನವನ್ನು ಭೌತಿಕವಾಗಿ ವೀಕ್ಷಿಸಲು ಅಥವಾ ಪರೀಕ್ಷಿಸಲು ಅವಕಾಶವಿಲ್ಲ,ಅದೇನಿದ್ದರೂ ವರ್ಚುವಲ್ ಶಾಪಿಂಗ್ ಆಗಿದೆ. ಹೀಗಾಗಿ ವಿಮರ್ಶೆಗಳು ಪ್ರಾಮಾಣಿಕ,ಅಧಿಕೃತ ಮತ್ತು ವಿಶ್ವಾಸಾರ್ಹವಾಗಿರುವುದು ಅಗತ್ಯವಾಗಿದೆ ಎಂದು ಅದು ತಿಳಿಸಿದೆ.