ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಮ್ಮು ಹಾಗೂ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಶುಕ್ರವಾರ ಘೋಷಿಸಿದ್ದಾರೆ. ''ನಾನು ಇನ್ನು ಮುಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ.
ಹೊಸ ತಲೆ ಮಾರು ಜವಾಬ್ದಾರಿ ತೆಗೆದುಕೊಳ್ಳಲು ಇದು ಉತ್ತಮ ಸಮಯ'' ಎಂದು ಅವರು ಹೇಳಿದ್ದಾರೆ.
ಈ ಹುದ್ದೆಯ ಚುನಾವಣೆಯಲ್ಲಿ ಪಕ್ಷದ ಯಾರು ಬೇಕಾದರೂ ಸ್ಪರ್ಧಿಸಬಹುದು. ಇದು ಪ್ರಜಾಪ್ರಭುತ್ವ ಪ್ರಕ್ರಿಯೆ ಎಂದು ಅವರು ತಿಳಿಸಿದ್ದಾರೆ. ಅಬ್ದುಲ್ಲಾ ಅವರ ಘೋಷಣೆ ಪ್ರತಿಯೊಬ್ಬರಿಗೂ ಅಚ್ಚರಿ ಉಂಟು ಮಾಡಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಹೇಳಿದೆ.
''ಪಕ್ಷದ ಹಿರಿಯ ಸಹೋದ್ಯೋಗಿಗಳ ಪ್ರಯತ್ನದ ಹೊರತಾಗಿಯೂ ಡಾ. ಸಾಹೀಬ್ (ಫಾರೂಕ್ ಅಬ್ದುಲ್ಲಾ) ಅವರು ತಮ್ಮ ನಿರ್ಧಾರವನ್ನು ಬದಲಾಯಿಸುವುದಿಲ್ಲ ಎಂದು ಹಠ ಹಿಡಿದರು'' ಎಂದು ನ್ಯಾಷನಲ್ ಕಾನ್ಫರೆನ್ಸ್ ಟ್ವೀಟ್ ಮಾಡಿದೆ. ಅಧ್ಯಕ್ಷರ ಹುದ್ದೆಗೆ ಡಿಸೆಂಬರ್ 5ರಂದು ಚುನಾವಣೆ ನಡೆಸುವ ಜವಾಬ್ದಾರಿಯನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗೆ ವಹಿಸಲಾಗಿದೆ. ಅದುವರೆಗೆ ಅಬ್ದುಲ್ಲಾ ಅವರು ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ತಿಳಿಸಿದೆ.