ಕಾಸರಗೋಡು: ಚೆರ್ಕಳ ಸರ್ಕರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾಸರಗೋಡು ಜಿಲ್ಲಾ ಶಾಲಾ ವಿಜ್ಞಾನ-ಗಣಿತಶಾಸ್ತ್ರ-ವೃತ್ತಿಪರಿಚಯ ಮೇಳದ ಐ.ಟಿ ಮೇಳದ ಸ್ಪರ್ಧೆಗಳ ಮೂರೂ ವಿಭಾಗಗಳಲ್ಲಿ ಕಾಸರಗೋಡು ಶೈಕ್ಷಣಿಕ ಉಪಜಿಲ್ಲೆ 535ಅಂಕಗಳೊಂದಿಗೆ ಚಾಂಪ್ಯನ್‍ಶಿಪ್ ಪಡೆದುಕೊಂಡಿದೆ. ಹೊಸದುರ್ಗ 462ಅಂಕಗಳೊಂದಿಗೆ ದ್ವಿತೀಯ, ಚೆರ್ವತ್ತೂರು ಉಪಜಿಲ್ಲೆ 440ಅಂಕಗಳೊಂದಿಗೆ ತೃತೀಯ, 391ಅಂಕಗಳೊಂದಿಗೆ ಕುಂಬಳೆ ಉಪಜಿಲ್ಲೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಗಣಿತಶಾಸ್ತ್ರ ಮೇಳದಲ್ಲೂ ಕಾಸರಗೋಡು ಸಮಗ್ರ ಚಾಂಪ್ಯನ್‍ಶಿಪ್ ಪಡೆದುಕೊಂಡಿದೆ. ಬುಧವಾರ ನಡೆದ ಗಣಿತಶಾಸ್ತ್ರ ಸ್ಪರ್ಧೆಗಳಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ 331ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಎರಡನೇ ದಿನವಾದ ಗುರುವಾರ ನಡೆದ ಕ್ಲೇ ಮೋಡೆಲಿಂಗ್, ಬಡ್ಡಿಂಗ್ ಏಂಡ್ ಗ್ರಾಫ್ಟಿಂಗ್, ಚಾಕ್ ತಯಾರಿ, ಅಗರ್‍ಬತ್ತಿ, ಕೊಡೆ, ಬೊಣಬೆಗಳ ತಯಾರಿ, ಗೆರಟೆಗಳಲ್ಲಿ ಕಲಾರಚನೆ, ಬುಟ್ಟಿ ಹೆಣೆಯುವಿಕೆ, ಮರದ ಪೀಠೋಪಕರಣ ತಯಾರಿ, ಇಲೆಕ್ಟ್ರಿಕಲ್ ವಯರಿಂಗ್, ಓಲೆಗರಿಗಳಿಂದ ನಾನಾ ಮಾದರಿಯ ಬುಟ್ಟಿಗಳ ಹೆಣೆಯುವಿಕೆ, ವೈಜ್ಞಾನಿಕ ಸಲಕರಣೆಗಳ ತಯಾರಿ, ಭೂಕಂಪದ ಬಗ್ಗೆ ಮುನ್ಸೂಚನೆ ನೀಡಬಲ್ಲ ಸಲಕರಣೆಗಳು ಹೀಗೆ ನಾನಾ ರೀತಿಯ ರಚನೆಗಳ ಮೂಲಕ ವಿದ್ಯಾರ್ಥಿಗಳು ಗಮನಸೆಳೆದರು.
ಬುಧವಾರ ನಡೆದ ಜಿಲ್ಲಾ ವಿಜ್ಞಾನ ಮೇಳವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮೇಳದ ಅಂಗವಾಗಿ ವಿದ್ಯಾರ್ಥಿಗಳು, ಶಿಕ್ಷಕಿಯರು ಸೇರಿ ನಡೆಸಿಕೊಟ್ಟ ಮೆಗಾ ತಿರುವಾದಿರ ನೃತ್ಯ ಪ್ರಶಂಸೆಗೆ ಕಾರಣವಾಯಿತು.