ಚೆನ್ನೈ: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಘಟನೆ ಆರಂಭವಾಗಿ 60 ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸಂಘಟನೆಯು ದೊಡ್ಡಮಟ್ಟದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಿದೆ ಜೊತೆಗೆ, ಮತಾಂತರ ವಿರೋಧಿ ಕಾನೂನನ್ನು ರಾಷ್ಟ್ರಮಟ್ಟದಲ್ಲಿ ಜಾರಿಗೊಳಿಸುವಂತೆ ಆಗ್ರಹಿಸಿ ಉಗ್ರ ಹೋರಾಟ ನಡೆಸಲಿದೆ ಎಂದು ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ ಮಂಗಳವಾರ ತಿಳಿಸಿದರು.
'ಕರ್ನಾಟಕ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತಾಂತರ ವಿರೋಧಿ ಕಾನೂನು ಅನುಷ್ಠಾನಗೊಳಿಸುವಲ್ಲಿ ವಿಎಚ್‌ಪಿ ಯಶಸ್ವಿಯಾಗಿದೆ. ತಮಿಳುನಾಡು ಸಹ ಇಂಥದ್ದೇ ಕಾನೂನು ಜಾರಿ ಮಾಡಬೇಕೆಂಬುದು ನಮ್ಮ ಬಯಕೆ' ಎಂದು ಹೇಳಿದರು.
'ಇನ್ನೆರಡು ವರ್ಷಗಳಲ್ಲಿ ವಿಎಚ್‌ಪಿ 60 ವರ್ಷಗಳನ್ನು ಪೂರ್ಣಗೊಳಿಸಲಿದೆ. ಈ ಸ್ಮರಣಾರ್ಥ ಹಿಂದೂಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಅಂದರೆ ಲವ್ ಜಿಹಾದ್, ಗೋ ಹತ್ಯೆ, ಮತಾಂತರ ಮುಂತಾದವುಗಳ ಬಗ್ಗೆ ಅರಿವು ಅಭಿಯಾನ ನಡೆಸಲಾಗುವುದು' ಎಂದರು.