ನವದೆಹಲಿ: ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ, ಇಂದು ಸಂಧ್ಯಾ ದೇವನಾಥನ್ ಅವರನ್ನು ಮೆಟಾ ಇಂಡಿಯಾದ ಉಪಾಧ್ಯಕ್ಷರಾಗಿ ನೇಮಕ ಮಾಡಿದೆ. ಸಂಧ್ಯಾ ದೇವನಾಥನ್ ಅವರು ಮೆಟಾದ ವ್ಯಾಪಾರ ಮತ್ತು ಭಾರತದಲ್ಲಿ ದೀರ್ಘಾವಧಿಯ ಬೆಳವಣಿಗೆಯನ್ನು ಬೆಂಬಲಿಸುತ್ತಾ ಅದರ ಪಾಲುದಾರರು ಮತ್ತು ಗ್ರಾಹಕರಿಗೆ ಸೇವೆ ಸಲ್ಲಿಸುವ ಕಡೆಗೆ ಗಮನ ಹರಿಸಲಿದ್ದಾರೆ.
ವಾಟ್ಸಾಪ್‌ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಪ್ಲಾಟ್‌ಫಾರ್ಮ್‌ನ ಭಾರತದ ಸಾರ್ವಜನಿಕ ನೀತಿ ನಿರ್ದೇಶಕ ರಾಜೀವ್ ಅಗರ್ವಾಲ್ ಕೂಡ ಈ ವಾರ ರಾಜೀನಾಮೆ ನೀಡಿದ್ದರು. ಸಂಧ್ಯಾ ದೇವನಾಥನ್ ಮುಂದಿನ ವರ್ಷ ಜನವರಿ 1 ರಂದು ತಮ್ಮ ಹೊಸ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಸಂಧ್ಯಾ ದೇವನಾಥನ್ ಕಂಪನಿಯ ಭಾರತದ ಚಾರ್ಟರ್ ಅನ್ನು ಮುನ್ನಡೆಸಲಿದ್ದಾರೆ. ದೇಶದ ಪ್ರಮುಖ ಬ್ರಾಂಡ್‌ಗಳು, ಕ್ರಿಯೇಟರ್ಗಳು, ಜಾಹೀರಾತುದಾರರು ಮತ್ತು ಪಾಲುದಾರರೊಂದಿಗೆ ಸಂಬಂಧಗಳನ್ನು ಬಲಪಡಿಸಲಿದ್ದಾರೆ. ಹಾಗೆಯೇ ಭಾರತದಲ್ಲಿ ಮೆಟಾ ಆದಾಯವನ್ನು ಹೆಚ್ಚಿಸಲು ಕೆಲಸ ಮಾಡಲಿದ್ದಾರೆ' ಎಂದು ಮೆಟಾ ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ನೇಮಕಾತಿಯ ಕುರಿತು, ಮೆಟಾದ ಬಿಸಿನೆಸ್ ಮುಖ್ಯಸ್ಥ ಮಾರ್ನೆ ಲೆವಿನ್ 'ಭಾರತವು ಡಿಜಿಟಲ್ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ. ಮೆಟಾ ರೀಲ್ಸ್ ಮತ್ತು ಬಿಸಿನೆಸ್ ಮೆಸೇಜಿಂಗ್ ಅನ್ನು ಭಾರತದಲ್ಲಿ ಮೊದಲು ಬಿಡುಗಡೆ ಮಾಡಿದ್ದು ಭಾರತದಲ್ಲಿ ನಮ್ಮ ಮೊದಲ ಎಂಡ್-ಟು-ಎಂಡ್ ಶಾಪಿಂಗ್ ಅನುಭವವಾಗಿರುವ WhatsApp ನಲ್ಲಿ JioMart ಅನ್ನು ಇತ್ತೀಚೆಗೆ ಪ್ರಾರಂಭಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ' ಎಂದು ಹೇಳಿದರು.