ಕಾಸರಗೋಡು: ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಿರುವ ಏಕ ನಿಲುಗಡೆ ಕೇಂದ್ರ(ವನ್ ಸ್ಟಾಪ್ ಸೆಂಟರ್)ಕ್ಕೆ ಹೊಸ ಕಟ್ಟಡ ಸಿದ್ಧಗೊಂಡಿದೆ. ಕಾಸರಗೋಡಿನ ಅಣಂಗೂರಿನಲ್ಲಿ 61.23 ಲಕ್ಷ ರೂ.ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಪೂರ್ಣಗೊಂಡಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವನ್‍ಸ್ಟಾಪ್ ಸೆಂಟರ್ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಳಿದೆ.
ಏಕ ಕಾಲಕ್ಕೆ ಐದು ಮಂದಿಗೆ ವಾಸ್ತವ್ಯಕ್ಕೆ ಅನುಕೂಲವಾಗುವಂತೆ ವನ್ ಸ್ಟಾಪ್ ಕೇಂದ್ರ ಸಿದ್ಧಪಡಿಸಲಾಗಿದ್ದು, ವಸತಿ ಜತೆಗೆ ವಿಡಿಯೋ ಕಾನ್ಫರೆನ್ಸ್, ಕೌನ್ಸೆಲಿಂಗ್ ಸೆಂಟರ್ ಇತ್ಯಾದಿಗಳನ್ನು ಹೊಂದಿದೆ. ಕೇಂದ್ರದ ಆಡಳಿತ ನಿರ್ವಾಹಕರು, ಕೇಸ್ ವರ್ಕರ್, ಆಪ್ತ ಸಮಾಲೋಚಕರು, ಅರೆವೈದ್ಯಕೀಯ ಸಿಬ್ಬಂದಿ, ವಿವಿಧೋದ್ದೇಶ ಸಹಾಯಕರು, ಭದ್ರತಾ ಸಿಬ್ಬಂದಿ, ಪೆÇಲೀಸ್ ಸೌಲಭ್ಯ ಅಧಿಕಾರಿ, ವಕೀಲರು ಸೇರಿದಂತೆ 12 ಮಂದಿ ಸಿಬ್ಬಂದಿಯನ್ನು ಈಗಾಗಲೇ ನೇಮಿಸಲಾಗಿದೆ.
ಏನಿದು ಒನ್ ಸ್ಟಾಪ್ ಸೆಂಟರ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ, ಕೇಂದ್ರ ಸರ್ಕಾರದ ನೆರವಿನೊಂದಿಗೆ ವನ್ ಸ್ಟಾಪ್ ಸೆಂಟರ್ ಕಾರ್ಯಾಚರಿಸಲಿದೆ. ಸಾರ್ವಜನಿಕ ಯಾ ಖಾಸಗಿ ಸ್ಥಳಗಳಲ್ಲಿ ದೈಹಿಕ, ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯರು ಮತ್ತು ಮಕ್ಕಳು ಆಸ್ಪತ್ರೆ, ಪೆÇಲೀಸ್ ಠಾಣೆ, ಆಶ್ರಯಕೇಂದ್ರ, ಆಪ್ತಸಮಾಲೋಚನಾ ಸಂಸ್ಥೆಗಳ ಕದ ತಟ್ಟುವುದರ ಜತೆಗೆ ನ್ಯಾಯಕ್ಕಾಗಿ ವಿವಿಧೆಡೆ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವನ್ ಸ್ಟಾಪ್ ಸೆಂಟರ್ ಕಾರ್ಯಪ್ರವೃತ್ತವಾಗಲಿದೆ.
ಸಮಾಲೋಚಕರು, ವೈದ್ಯರು, ಪೆÇಲೀಸ್, ವಕೀಲರು, ವನಿತಾ ಸಂರಕ್ಷಣಾ ಅಧಿಕಾರಿಗಳ ಸೇವೆ ಒಂದೇ ಸೂರಿನಡಿ ಲಭ್ಯವಾಗಲಿದೆ. ಪೆÇಲೀಸ್ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಗತ್ಯವಿದ್ದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವೂ ಕೇಂದ್ರದಲ್ಲಿ ಲಭ್ಯವಿದೆ. ಹಿಂಸಾಚಾರದ ಸಂತ್ರಸ್ತರು ಐದು ದಿನಗಳವರೆಗೆ ಕೇಂದ್ರಗಳಲ್ಲಿ ಉಳಿದುಕೊಳ್ಳಬಹುದಾಗಿದೆ. ಅಲ್ಲದೆ, ದೈಹಿಕ, ಮಾನಸಿಕ ಮತ್ತು ಲೈಂಗಿಕ ಹಿಂಸೆಗೆ ಗುರಿಯಾದವರು ನೇರವಾಗಿ ಅಥವಾ ವನಿತಾ ಸಹಾಯವಾಣಿ (1091), ನಿರ್ಭಯಾ ಟೋಲ್ ಫ್ರೀ (1800 425 1400), ಮಿತ್ರ (181) ಮತ್ತು ಚೈಲ್ಡ್‍ಲೈನ್ (1098)ಗೆ ಕರೆ ಮಾಡುವ ಮೂಲಕವೂ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೆ ಸಾಮಾಝಿಕ ಕಾರ್ಯಕರ್ತರು ಮತ್ತು ಸ್ವಯಂಸೇವಾ ಗುಂಪುಗಳಿಗೆ ಮಾಹಿತಿ ನೀಡಬಹುದು.
ದೌರ್ಜನ್ಯಕ್ಕೊಳಗಾದ ಮಹಿಳೆಯರು, ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ 'ವನ್ ಸ್ಟಾಪ್ ಕೇಂದ್ರ': ಏಕ ಗವಾಕ್ಷಿ ಕೇಂದ್ರದ ಮೂಲಕ ಸಂತ್ರಸ್ತರಿಗೆ ಲಭಿಸಲಿದೆ ಎಲ್ಲ ನೆರವು
0
ನವೆಂಬರ್ 03, 2022
Tags