ನವದೆಹಲಿ: ಹರಿಯಾಣದ ಫರಿದಾಬಾದ್‌ನ ಅರಣ್ಯ ಪ್ರದೇಶದಲ್ಲಿ ಗುರುವಾರ ದೇಹದ ಭಾಗಗಳಿದ್ದ ಸೂಟ್‌ಕೇಸ್ ಪತ್ತೆಯಾಗಿದ್ದು, ದೆಹಲಿಯಲ್ಲಿ ತನ್ನ ಪ್ರಿಯಕರ ಆಫ್ತಾಬ್ ಅಮೀನ್ ಪೂನಾವಾಲಾನಿಂದ ಹತ್ಯೆಗೀಡಾದ ಶ್ರದ್ಧಾ ವಾಲಕರ್ ದೇಹವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸೂರಜ್‌ಕುಂಡ್‌ನ ಅರಣ್ಯಭಾಗದಲ್ಲಿ ಪತ್ತೆಯಾದ ಸೂಟ್‌ಕೇಸ್‌ಗೆ ಸಂಬಂಧಿಸಿದಂತೆ ಫರಿದಾಬಾದ್ ಪೊಲೀಸರು ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ಪೊಲೀಸರ ಪ್ರಕಾರ ಅವಶೇಷಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಲಾಗಿದ್ದು, ಸೂಟ್‌ಕೇಸ್ ಬಳಿ ಬಟ್ಟೆ ಮತ್ತು ಬೆಲ್ಟ್ ಕೂಡ ಪತ್ತೆಯಾಗಿದೆ.
ಮೇಲ್ನೋಟಕ್ಕೆ ವ್ಯಕ್ತಿಯನ್ನು ಬೇರೆಡೆ ಕೊಲೆ ಮಾಡಲಾಗಿದ್ದು, ದೇಹದ ಒಂದು ಭಾಗವನ್ನು ಮಾತ್ರ ಇಲ್ಲಿ ಎಸೆಯಲಾಗಿದೆ ಎಂದು ಫರಿದಾಬಾದ್ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಷಯ ತಿಳಿದ ಮೆಹ್ರೌಲಿ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸೂಟ್‌ಕೇಸ್‌ನಲ್ಲಿರುವ ದೇಹದ ಭಾಗ ಶ್ರದ್ಧಾಳದ್ದಿರಬಹುದೆಂದು ದೆಹಲಿ ಪೊಲೀಸರು ಶಂಕಿಸಿದ್ದಾರೆ. ತಿಂಗಳಿಗಿಂತ ಹಳೆಯದಾದ ದೇಹದ ಭಾಗ ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಖಾತ್ರಿಯಾಗಿಲ್ಲ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದರ ವರದಿ ಬಳಿಕ ಉಳಿದ ಸಂಗತಿಗಳು ತಿಳಿಯಲಿವೆ ಎಂದು ಮೂಲಗಳು ಹೇಳಿವೆ.
ಅಗತ್ಯಬಿದ್ದರೆ ಡಿಎನ್‌ಎ ಪರೀಕ್ಷೆಗೂ ದೇಹದ ಭಾಗವನ್ನು ಕಳುಹಿಸುವುದಾಗಿ ಪೊಲೀಸರು ಹೇಳಿದ್ದಾರೆಂದು ಎಎನ್‌ಐ ವರದಿ ಮಾಡಿದೆ.