ನವದೆಹಲಿ :ದಿಲ್ಲಿಯ ಛಾವಾಲಾ ಪ್ರದೇಶದಲ್ಲಿ2012ರಲ್ಲಿ 19 ವರ್ಷದ ತರುಣಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಪರಿಗಣಿಸಿ ದಿಲ್ಲಿ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದ ಮೂವರು ಆರೋಪಿಗಳನ್ನು ಇಂದು ಸುಪ್ರೀಂ ಕೋರ್ಟ್ Supreme Court ಖುಲಾಸೆಗೊಳಿಸಿದೆ.
ಈ ಪ್ರಕರಣವು ಫೆಬ್ರವರಿ 2012 ರಲ್ಲಿ ನಡೆದಿದ್ದು, ಹರ್ಯಾಣದಲ್ಲಿ 19 ವರ್ಷದ ತರುಣಿಯ ವಿರೂಪಗೊಂಡ ಮೃತದೇಹವು ಹೊಲದಲ್ಲಿ ಪತ್ತೆಯಾಗಿತ್ತು. ಅತ್ಯಾಚಾರಕ್ಕೆ ಒಳಗಾದ ನಂತರ ತರುಣಿಯನ್ನು ಬರ್ಬರವಾಗಿ ಕೊಲ್ಲಲಾಗಿತ್ತು. ಈ ಕುರಿತು ದಿಲ್ಲಿಯ ಛಾವಾಲಾ (ನಜಾಫ್‌ಗಢ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 2014 ರಲ್ಲಿ ದಿಲ್ಲಿ ನ್ಯಾಯಾಲಯವು 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಹಾಗೂ ಕೊಂದಿರುವ ಮೂವರು ಪುರುಷರನ್ನು ದೋಷಿ ಎಂದು ಘೋಷಿಸಿತು ಹಾಗೂ ಅವರಿಗೆ ಮರಣದಂಡನೆ ವಿಧಿಸಿತ್ತು.
ಮರಣದಂಡನೆಯನ್ನು ಆಗಸ್ಟ್ 26, 2014 ರಂದು ದಿಲ್ಲಿ ಹೈಕೋರ್ಟ್ ದೃಢಪಡಿಸಿತ್ತು.
ರವಿಕುಮಾರ್, ರಾಹುಲ್ ಹಾಗೂ ವಿನೋದ್ ಎಂಬ ಮೂವರು ವ್ಯಕ್ತಿಗಳನ್ನು ಅಪಹರಣ, ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದ ವಿವಿಧ ಆರೋಪಗಳ ಅಡಿಯಲ್ಲಿ ದೋಷಿಗಳೆಂದು ಘೋಷಿಸಲಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ದುಷ್ಕರ್ಮಿಗಳು ಮೊದಲು ಯುವತಿಯನ್ನು ಅಪಹರಿಸಿ, ಅತ್ಯಾಚಾರಗೈದು, ಹತ್ಯೆ ಮಾಡಿ ಶವವನ್ನು ಹರ್ಯಾಣದ ರೇವಾರಿ ಜಿಲ್ಲೆಯ ರೋಧೈ ಗ್ರಾಮದ ಹೊಲದಲ್ಲಿ ಎಸೆದ ಕಾರಣ ಅಪರಾಧವು ಕ್ರೂರ ಸ್ವರೂಪದ್ದಾಗಿದೆ.