ನವದೆಹಲಿ: 'ಜಾನುವಾರುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚರ್ಮಗಂಟು ರೋಗ ತಡೆಗೆ ರಾಷ್ಟ್ರೀಯ ಆರೋಗ್ಯ ಯೋಜನೆ ರೂಪಿಸುವಂತೆ ಕೋರಿರುವ ಅರ್ಜಿ ಸಂಬಂಧ ತಕ್ಷಣ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರ ಮತ್ತು ಆರು ರಾಜ್ಯಗಳಿಗೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು, ಪುಣೆ ಮೂಲದ ಸರ್ಕಾರೇತರ ಸಂಸ್ಥೆ ಆರ್ಯವರ್ತ ಮಹಾಸಭಾ ಫೌಂಡೇಷನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿತು.
ಈ ಅರ್ಜಿಗೆ ತಕ್ಷಣ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ, ರಾಜಸ್ಥಾನ, ಗುಜರಾತ್, ಉತ್ತರಪ್ರದೇಶ, ಪಂಜಾಬ್, ಹರಿಯಾಣ ಹಾಗೂ ಮಧ್ಯಪ್ರದೇಶ ಸರ್ಕಾರಕ್ಕೆ ಪೀಠವು ನೋಟಿಸ್ ಜಾರಿ ಮಾಡಿತು.
ಅರ್ಜಿದಾರರ ಪರ ವಕೀಲ ಪವನ್ ಪ್ರಕಾಶ್ ಪಾಠಕ್, ಚರ್ಮಗಂಟು ರೋಗವು ಕ್ಷಿಪ್ರವಾಗಿ ಹರಡುತ್ತಿದೆ. ದೇಶದಲ್ಲಿ ಸುಮಾರು 20 ಕೋಟಿ ಜಾನುವಾರುಗಳಿವೆ. ಜುಲೈನಿಂದ ಈವರೆಗೆ ಎಂಟು ರಾಜ್ಯಗಳಲ್ಲಿ ಸುಮಾರು 75 ಸಾವಿರ ಜಾನುವಾರುಗಳು ಮೃತಪಟ್ಟಿವೆ. ತಕ್ಷಣವೇ ಈ ರೋಗ ನಿಯಂತ್ರಿಸಲು ದೇಶದಾದ್ಯಂತ ಎಲ್ಲ ಜಾನುವಾರುಗಳಿಗೆ 'ಗೋಟ್ ಪಾಕ್ಸ್' ಲಸಿಕೆ ಹಾಕಬೇಕು. ಇದಕ್ಕಾಗಿ ರಾಷ್ಟ್ರೀಯ ಆರೋಗ್ಯ ನೀತಿ ರೂಪಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.