ಕೊಚ್ಚಿ: ಗೌತಮ್ ಅದಾನಿ ಸಮೂಹದ ವಿಳಿಂಞ ಬಂದರು ನಿರ್ಮಾಣ ಕಾಮಗಾರಿ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿರುವ ಕಾರಣ ಕೇರಳ ಪೊಲೀಸರು ಬಂದರಿಗೆ ಮಂಗಳವಾರ ಬಿಗಿ ಭದ್ರತೆ ಒದಗಿಸಿದ್ದಾರೆ.
'ಬಂದರಿನ ಭದ್ರತೆಗಾಗಿ ನೇಮಿಸಿದ್ದ ಪೊಲೀಸರ ಸಂಖ್ಯೆಯನ್ನು 300ರಿಂದ 400ಕ್ಕೆ ಏರಿಕೆ ಮಾಡಲಾಗಿದೆ' ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
'ಬಂದರು ಪ್ರದೇಶದಲ್ಲಿ ಮತ್ತೆ ಹಿಂಸಾಚಾರ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನೆರೆಯ ಜಿಲ್ಲೆಗಳ ಪೊಲೀಸರನ್ನೂ ಕರೆಸಿ ಭದ್ರತೆ ಹೆಚ್ಚಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ' ಎಂದೂ ತಿಳಿಸಿದ್ದಾರೆ.
ಜನರ ಪ್ರತಿಭಟನೆಯ ಕಾರಣ ಕಳೆದ ಮೂರು ತಿಂಗಳಿನಿಂದ ಬಂದರು ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿತ್ತು. ಕೆಥೋಲಿಕ್ ಧರ್ಮಗುರುಗಳು ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಬಂದರು ನಿರ್ಮಾಣದಿಂದ ಅಲ್ಲಿನ ಜನರ ಜೀವನೋಪಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಪ್ರತಿಭಟನಕಾರರ ಆರೋಪವಾಗಿದೆ.
ಬಂದರು ವಿರೋಧಿ ಪ್ರತಿಭಟನಕಾರರು ಭಾನುವಾರ ರಾತ್ರಿ ವಿಳಿಂಞ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ ಪರಿಣಾಮ 36 ಮಂದಿ ಪೊಲೀಸರು ಸೇರಿದಂತೆ 80 ಮಂದಿ ಗಾಯಗೊಂಡಿದ್ದರು.
'ಬಂದರು ನಿರ್ಮಾಣ ಕಾಮಗಾರಿ ಕಾನೂನುಬದ್ಧವಾಗಿಯೇ ನಡೆಯುತ್ತಿದೆ' ಎಂದು ಅದಾನಿ ಸಮೂಹವು ಹೇಳಿದೆ.