ಸೈಬರ್ ಕ್ರೈಮ್‌ಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ ವಂಚಿಸಲು ಗಾಳ ಹಾಕುವವರೇ ಹೆಚ್ಚು. ಹಾಗಂತ ಫೋನ್ ಬಳಕೆ ಮಾಡದೆ ಇರಲು ಕೂಡ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಅವುಗಳನ್ನು ಬಳಸುವಾಗ ಎಚ್ಚರಿಕೆ ವಹಿಸುವುದೇ ಉತ್ತಮ ಹಾಗೂ ಅತಿ ಅಗತ್ಯ.
ಹೀಗೆ ಸ್ಮಾರ್ಟ್‌ಫೋನ್ ಮಾತ್ರವಲ್ಲ ಒಂದು ಸಾಮಾನ್ಯ ಬೇಸಿಕ್ ಫೋನ್ ಬಳಕೆ ಕೂಡ ಅಪಾಯಕ್ಕೆ ಎಡೆಮಾಡಿಕೊಟ್ಟಂತಾಗಬಹುದು. ಅಂದರೆ ನಾವು ಸಿಮ್ ಖರೀದಿಸಲು ಕೊಟ್ಟ ದಾಖಲೆಗಳನ್ನೇ ಬಳಸಿಕೊಂಡು, ನಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಪಡೆಯುತ್ತಿರುವ ಪ್ರಕರಣಗಳೂ ನಡೆಯುತ್ತಿವೆ.
ಈ ರೀತಿ ಇನ್ನೊಬ್ಬರ ದಾಖಲೆ ನೀಡಿ ಪಡೆಯುವ ಸಿಮ್‌ಗಳನ್ನು ವಂಚನೆಗೆ ಇಲ್ಲವೇ ಸಮಾಜದ್ರೋಹಿ ಕೆಲಸಗಳಿಗೆ ಬಳಸಲಾಗುತ್ತದೆ. ಇಂಥ ಅಪರಾಧಗಳಿಗೆ ಸಂಬಂಧಿಸಿದಂತೆ ಪೊಲೀಸರು ಬೆನ್ನು ಹತ್ತಿದಾಗ ನಿಜವಾದ ಅಪರಾಧಿಗಳು ಸಿಕ್ಕಿಹಾಕಿಕೊಳ್ಳುವ ಬದಲು ಅಂಥವರು ಬಳಸುತ್ತಿದ್ದ ಸಿಮ್ ಯಾರ ಹೆಸರಲ್ಲಿತ್ತೋ ಆ ನಿರಪರಾಧಿಗಳು ಪೊಲೀಸರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.
ಇಂಥ ಸಮಸ್ಯೆಗಳು ಉದ್ಭವಿಸದಂತೆ ತಡೆಯಲು ಮತ್ತು ತಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಪಡೆದಿದ್ದಾರೆಯೇ ಎಂದು ಸಾರ್ವಜನಿಕರು ತಿಳಿಯಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ವ್ಯವಸ್ಥೆಯೊಂದನ್ನು ಮಾಡಿದೆ. ಅದರಲ್ಲಿ ಸಾರ್ವಜನಿಕರು ತಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಸಿಮ್ ಖರೀದಿಸಿದ್ದಾರೆಯೇ ಎಂದು ತಿಳಿಯುವುದು ಮಾತ್ರವಲ್ಲ, ಅಂಥದ್ದು ಗಮನಕ್ಕೆ ಬಂದಾಗ ಅಲ್ಲೇ ಆ ಬಗ್ಗೆ ರಿಪೋರ್ಟ್ ಕೂಡ ಮಾಡಬಹುದು.
ದೂರಸಂಪರ್ಕ ಇಲಾಖೆಯೇ ಇದಕ್ಕಾಗಿ ವ್ಯವಸ್ಥೆ ಮಾಡಿದ್ದು, ಸಾರ್ವಜನಿಕರು ಪರಿಶೀಲಿಸಿಕೊಳ್ಳಲು ಈ ಲಿಂಕ್ ( https://tafcop.dgtelecom.gov.in/ ) ಬಳಸಬಹುದು. ಈ ವೆಬ್ಸೈಟ್ ತೆರೆಯುತ್ತಿದ್ದಂತೆ 'ಎಂಟರ್ ಯುವರ್ ಮೊಬೈಲ್ಫೋನ್ ನಂಬರ್' ಎಂಬ ಬಾಕ್ಸ್ ಕಾಣಿಸುತ್ತದೆ. ಅಲ್ಲಿ ತಮ್ಮ ಮೊಬೈಲ್ ಫೋನ್ ನಂಬರ್ ನಮೂದಿಸಿದರೆ, ಆ ನಂಬರ್ಗೆ ಒಂದು ಒಟಿಪಿ ಬರುತ್ತದೆ. ಒಟಿಪಿಯನ್ನು ನಮೂದಿಸಿ 'ವ್ಯಾಲಿಡೇಟ್' ಎಂದಿರುವಲ್ಲಿ ಪ್ರೆಸ್ ಮಾಡಿದರೆ ಇನ್ನೊಂದು ವಿಂಡೋ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಬಳಸುತ್ತಿರುವ ನಂಬರ್ ಹೊರತಾಗಿ ಬೇರೆ ನಂಬರ್ ತೋರಿಸಿದರೆ ನಿಮ್ಮ ಹೆಸರಿನಲ್ಲಿ ಬೇರೆ ಯಾರೋ ಸಿಮ್ ಪಡೆದಿದ್ದಾರೆ ಎಂದರ್ಥ. ಈ ಕುರಿತು ಅಲ್ಲೇ ನೀವು ರಿಪೋರ್ಟ್ ಮಾಡಿ ಕ್ರಮ ಜರುಗಿಸುವಂತೆ ಮಾಡಬಹುದು. 'ದಿಸ್ ಈಸ್ ನಾಟ್ ಮೈ ನಂಬರ್' ಎಂಬುವುದನ್ನು ಕ್ಲಿಕ್ ಮಾಡಿ ರಿಪೋರ್ಟ್ ಎಂಬುವುದನ್ನು ಪ್ರೆಸ್ ಮಾಡಿದರಾಯ್ತು.