ಪುರಿ: ಜಗನ್ನಾಥ ದೇವಾಲಯದ ಗರ್ಭಗುಡಿ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ಬಾಂಗ್ಲಾದೇಶದ ಪ್ರಜೆಯೊಬ್ಬನ ವಿರುದ್ಧ ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿಯು(ಎಸ್‌ಜೆಟಿಎ) ಭಾನುವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹರಿದಾಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಆಕಾಶ್ ಚೌಧರಿ ಎಂದು ಗುರುತಿಸಲಾಗಿದೆ. ಆತ ಇಸ್ಕಾನ್ ಅನುಯಾಯಿ ಮತ್ತು ಯುಟ್ಯೂಬರ್ ಎಂದು ಹೇಳಲಾಗಿದೆ.
ದೇವಸ್ಥಾನದ ಜಯ-ವಿಜಯ ಧ್ವಾರದಿಂದ ಈ ವಿಡಿಯೊ ಚಿತ್ರೀಕರಿಸಲಾಗಿದೆ. ಗರ್ಭಗುಡಿಯ ರತ್ನ ಸಿಂಹಾಸನದ ಮೇಲಿರುವ ದೇವತೆಗಳ ಮೂರ್ತಿಗಳನ್ನು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ.
12ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಆವರಣದ ಒಳಗೆ ಮೊಬೈಲ್ ಫೋನ್ ಮತ್ತು ಕ್ಯಾಮೆರಾವನ್ನು ನಿಷೇಧಿಸಲಾಗಿದೆ. ಆವರಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರೆಲ್ಲರ ಕಣ್ತಪ್ಪಿಸಿ ಆತ ಹೇಗೆ ಗೆಜೆಟ್‌ಗಳನ್ನು ದೇವಸ್ಥಾನದ ಒಳಗೆ ತಂದ ಎಂಬ ಪ್ರಶ್ನೆ ಮೂಡಿದೆ ಎಂದು ಎಸ್‌ಜೆಟಿಎ ಹೇಳಿದೆ.
'ಇದು ಭದ್ರತಾ ಲೋಪವಲ್ಲ. ಆದರೆ ನಾವು ಭದ್ರತೆಯನ್ನು ಮತ್ತಷ್ಟು ಉನ್ನತೀಕರಿಸುತ್ತೇವೆ. ಬಾಂಗ್ಲಾದೇಶಿ ಪ್ರಜೆಯು ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಶ್ರೀ ಜಗನ್ನಾಥ ದೇವಸ್ಥಾನ ಕಾಯ್ದೆಯನ್ನು ಉಲ್ಲಂಘಿಸಿದ್ದಾನೆ' ಎಂದು ಎಸ್‌ಜೆಟಿಎ ಅಧಿಕಾರಿ (ಭದ್ರತೆ) ವಿ.ಎಸ್. ಚಂದ್ರಶೇಖರ್ ರಾವ್ ಅವರು ತಿಳಿಸಿದ್ದಾರೆ.
ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.