ಶ್ರೀನಗರ: ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರಗಾಮಿ ಸಂಘಟನೆ ಪತ್ರಕರ್ತರಿಗೆ ಆನ್‌ಲೈನ್‌ನಲ್ಲಿ ಬೆದರಿಕೆ ಹಾಕಿದ ಕೆಲ ದಿನಗಳ ನಂತರ, ಶ್ರೀನಗರ ಮೂಲದ ಹಲವು ವರದಿಗಾರರು ರಾಜೀನಾಮೆ ಸಲ್ಲಿಸಿ, ತಾವು ಕೆಲಸ ಮಾಡುವ ಮಾಧ್ಯಮ ಸಂಸ್ಥೆಗಳಿಂದ ಹೊರ ಹೋಗುತ್ತಿರುವುದಾಗಿ ಹೇಳಿದ್ದಾರೆ.
ಶ್ರೀನಗರದ ಮೂರು ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಉಗ್ರರು ಬೆದರಿಕೆ ಹಾಕಿದ ನಂತರ, ತೊಂದರೆಯಾಗುವುದನ್ನು ತಪ್ಪಿಸಲು ಮೂವರು ವರದಿಗಾರರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರಾಜೀನಾಮೆ ಪತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
'ನಾನು ವರದಿಗಾರನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಮತ್ತು ಮೀಡಿಯಾ ಹೌಸ್‌ನಿಂದ ಹೊರ ಹೋಗುತ್ತೇನೆ. ನವೆಂಬರ್ 14, 2022 ರಿಂದ ಡಬ್ಲ್ಯೂ.ಇ.ಎಫ್' ಎಂದು ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ನಾನು ನಾಗರಿಕ ಸಮಸ್ಯೆ, ನೀರು, ಚರಂಡಿ ಮತ್ತು ಸಾರಿಗೆಯ ಬಗ್ಗೆ ವರದಿ ಮಾಡುತ್ತಿದ್ದೇನೆ. ಈವರೆಗೆ ಸೇನೆಯ ಬಗ್ಗೆ ಏನನ್ನೂ ವರದಿ ಮಾಡಿಲ್ಲ ಅಥವಾ ಯಾವುದೇ ಸೇನಾ ಕಾರ್ಯಾಚರಣೆ ವರದಿ ಮಾಡಿಲ್ಲ. ಆದರೂ ಅವರು ನನ್ನನ್ನು ಸೇನೆಯ ಮಾಹಿತಿದಾರ ಎಂದು ಬ್ರಾಂಡ್ ಮಾಡಿದ್ದಾರೆ' ಎಂದು ಮತ್ತೊಬ್ಬ ವರದಿಗಾರ ಪೋಸ್ಟ್ ಮಾಡಿದ್ದಾರೆ.
ಲಷ್ಕರ್-ಎ-ತಯಬಾ ಅಂಗ ಸಂಸ್ಥೆ ಟಿಆರ್‌ಎಫ್ ಬೆದರಿಕೆಗಳು ಇದರ ಹಿಂದೆ ಇವೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿ ಪೊಲೀಸರು ಈಗಾಗಲೇ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಲಾಗಿದೆ.
ಎರಡು ಪ್ರಮುಖ ಸ್ಥಳೀಯ ಇಂಗ್ಲಿಷ್ ದೈನಿಕಗಳ ಸಂಪಾದಕರು ಸೇರಿದಂತೆ ಎರಡು ಡಜನ್‌ಗೂ ಹೆಚ್ಚು ಪತ್ರಕರ್ತರನ್ನು 'ದಿ ಕಾಶ್ಮೀರ್ ಫೈಟ್' ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಬೆದರಿಕೆ ಪೋಸ್ಟರ್‌ಗಳಲ್ಲಿ 'ಪೊಲೀಸ್, ಸೇನೆ ಮತ್ತು ಗುಪ್ತಚರ ಸಂಸ್ಥೆಗಳ ಏಜೆಂಟರು' ಎಂದು ಹಣೆಪಟ್ಟಿ ಕಟ್ಟಲಾಗಿದೆ.
ತನ್ನ ಇತ್ತೀಚಿನ ಬೆದರಿಕೆ ಪೋಸ್ಟ್‌ನಲ್ಲಿ, ಮೂರು ಮಾಧ್ಯಮ ಸಂಸ್ಥೆಗಳ ಎಲ್ಲಾ ಪತ್ರಕರ್ತರು ಮತ್ತು ಉದ್ಯೋಗಿಗಳ ಮೇಲೆ ದಾಳಿ ನಡೆಸುವ ಬಗ್ಗೆ ಟಿಆರ್‌ಎಫ್ ಎಚ್ಚರಿಕೆ ನೀಡಿದೆ.
ಈ ಪೋಸ್ಟ್‌ಗಳು ಕಾಶ್ಮೀರದ ಪತ್ರಕರ್ತ ವಲಯ ಮತ್ತು ವಿಶೇಷವಾಗಿ ಮೂರು ಮಾಧ್ಯಮ ಸಂಸ್ಥೆಗಳಿಗೆ ಸಂಬಂಧಿಸಿದ ಪತ್ರಕರ್ತರಲ್ಲಿ ಭೀತಿ ಉಂಟು ಮಾಡಿವೆ. ಅವರಲ್ಲಿ ಕೆಲವರು ತಮ್ಮ ರಾಜೀನಾಮೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರೆ, ಇತರರು ಭಯದಿಂದ ತಮ್ಮ ಕಚೇರಿಗಳಿಗೆ ಹಾಜರಾಗುತ್ತಿಲ್ಲ.
'ನನ್ನ ಕುಟುಂಬ ಎಷ್ಟು ಭಯಭೀತವಾಗಿದೆಯೆಂದರೆ, ಪೋಸ್ಟ್ ನೋಡಿದ ನಂತರ ನನ್ನ ಕೋಣೆಯಿಂದ ಹೊರಬರಲು ಸಹ ಅವರು ಬಿಡುತ್ತಿಲ್ಲ. ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಕೆಲಸ ತೊರೆದರೆ ಕುಟುಂಬದ ನಿರ್ವಹಣೆ ಹೇಗೇ? ಎಂದು ಪಟ್ಟಿಯಲ್ಲಿ ಹೆಸರು ಇರುವ ಪತ್ರಕರ್ತರೊಬ್ಬರು' ಆತಂಕ ವ್ಯಕ್ತಪಡಿಸಿದ್ದಾರೆ.