ಕಾಸರಗೋಡು: 61ನೇ ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ನ.4, 5 ಮತ್ತು 14, 15, 16ರಂದು ಕಾಸರಗೋಡು ಬಿಇಎಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಲಿದೆ. ನ.4 ಮತ್ತು 5ರಂದು ವೇದಿಕೆಯೇತರ ಸ್ಪರ್ಧೆಗಳು ಹಾಗೂ 14, 15, 16ರಂದು ವೇದಿಕೆ ಸ್ಪರ್ಧೆಗಳು ನಡೆಯುವುದು ಎಂದು ಕಾರ್ಯಕ್ರಮದ ಸಂಘಟಕರು ಮಂಗಳವಾರ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ನ.14ರಂದು ಬೆಳಗ್ಗೆ 10 ಗಂಟೆಗೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಕನ್ನಡದ ಖ್ಯಾತ ಚಲನಚಿತ್ರ ನಟ ಶಿವಧ್ವಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿವಿಧ ಕ್ಷೇತ್ರಗಳ ಗಣ್ಯರು ಶುಭ ಹಾರೈಸುವರು. ನ.16ರಂದು ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಉದುಮ ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸುವರು.
13 ವೇದಿಕೆಗಳಲ್ಲಾಗಿ ನಡೆಯುವ ಕಲೋತ್ಸವದ ಪ್ರಮುಖ ವೇದಿಕೆಗಳು ಬಿಇಎಂ ಎಚ್‍ಎಸ್‍ಎಸ್, ಜಿಯುಪಿಎಸ್ ಕಾಸರಗೋಡು, ಜಿವಿಎಚ್‍ಎಸ್ ಕಾಸರಗೋಡು, ಚಿನ್ಮಯ ವಿದ್ಯಾಲಯ ಸಭಾಂಗಣ, ಕಾಸರಗೋಡು ನಗರಸಭಾ ಸಭಾಂಗಣ, ನಗರಸಭಾ ಕಾನ್ಪರೆನ್ಸ್ ಸಭಾಂಗಣ ಇತ್ಯಾದಿಗಳಾಗಿವೆ. ವೇದಿಕೆ ಮತ್ತು ವೇದಿಕೇತರಗಳಲ್ಲಾಗಿ ಒಟ್ಟು 352 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 9000ಕ್ಕಿಂತ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ಈ ಕಾರ್ಯಕ್ರಮಕ್ಕೆ ಸುಮಾರು 18 ಲಕ್ಷ ರೂ. ವೆಚ್ಚ ಅಂದಾಜಿಸಲಾಗಿದೆ. ಇದಕ್ಕೆ ಊರವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ರಕ್ಷಕ ಶಿಕ್ಷಕ ಸಂಘ ಮತ್ತಿತರರು ಸಹಾಯಧನ ನೀಡುವರು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿಟಿಎ ಅಧ್ಯಕ್ಷ ಪಿ.ರಮೇಶ್, ಎಇಒ ಅಗಸ್ಟಿನ್ ಬರ್ನಾಡ್, ಶಾಲಾ ಪ್ರಾಂಶುಪಾಲ ರಾಜೇಶ್ಚಂದ್ರ, ಮುಖ್ಯೋಪಾಧ್ಯಾಯ ವಿನೀಶ್ ವಿನ್ಸೆಂಟ್, ಜಿಜಿ ಥೋಮಸ್ ಉಪಸ್ಥಿತರಿದ್ದರು.
ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ನ.4 ರಿಂದ
0
ನವೆಂಬರ್ 02, 2022
Tags