ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಜನ್ಮದಿನವನ್ನು (ಜ.23) ರಾಷ್ಟ್ರೀಯ ರಜಾದಿನವೆಂದು ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸೋಮವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ಅರ್ಜಿಯನ್ನು 'ಪಿಐಎಲ್ ಅಣಕ' ಎಂದು ಕರೆದಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ದಿವಾಲಾ ಪೀಠ ಈ ಮನವಿಯನ್ನು ತಿರಸ್ಕರಿಸಿತು. 'ನೇತಾಜಿ ಅವರ ಸೇವೆ ಗುರುತಿಸಲು ಉತ್ತಮ ಮಾರ್ಗವೆಂದರೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದಂತೆಯೇ ಕಠಿಣ ಪರಿಶ್ರಮ ಪಡುವುದು' ಎಂದು ಹೇಳಿದೆ.
ಈ ವಿಷಯ ಕಾರ್ಯಾಂಗದ ನೀತಿ ನಿರೂಪಣೆ ವ್ಯಾಪ್ತಿಗೆ ಬರುವುದರಿಂದ ನಿರ್ದಿಷ್ಟ ನಿರ್ಧಾರ ತೆಗೆದುಕೊಳ್ಳುವಂತೆ ನ್ಯಾಯಾಲಯವು ಸರ್ಕಾರಕ್ಕೆ ಸೂಚಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ರಜಾ ದಿನ ಘೋಷಿಸಬೇಕೇ ಅಥವಾ ಬೇಡವೇ ಎಂಬುದು ಸರ್ಕಾರದ ನೀತಿಯ ವಿಷಯವಾಗಿದೆ. ದೆಹಲಿ ಮತ್ತು ಇತರ ರಾಜ್ಯ ರಾಜಧಾನಿಗಳಲ್ಲಿ ಬೋಸ್ ಸ್ಮರಣಾರ್ಥ ಸ್ಮಾರಕ ಸಭಾಂಗಣ ಮತ್ತು ವಸ್ತುಸಂಗ್ರಹಾಲಯ ನಿರ್ಮಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಪೀಠ ನಿರಾಕರಿಸಿತು.
ಪಿಐಎಲ್‌ಗಳನ್ನು ಸಲ್ಲಿಸುವ ಮೊದಲು ವಕೀಲರು ಎರಡು ಬಾರಿ ಯೋಚಿಸಬೇಕು ಎಂದು ನ್ಯಾಯಾಲಯ ಹೇಳಿದೆ.