HEALTH TIPS

ಎರಡು ವರ್ಷದಲ್ಲಿ ಜಮ್ಮು-ಕಾಶ್ಮೀರ ಉಗ್ರಮುಕ್ತ!; ಕಾಶ್ಮೀರ ವಲಯ ಎಡಿಜಿಪಿ ವಿಜಯ ಕುಮಾರ್ ಶಪಥ..

                ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ನಂತರ ಭಯೋತ್ಪಾದಕ ಚಟುವಟಿಕೆ ಶೇ.75 ಇಳಿಕೆಯಾಗಿದೆ. ಸಕ್ರಿಯ ಭಯೋತ್ಪಾದಕರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಮುಂದಿನ ಎರಡು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರ ಉಗ್ರ ಮುಕ್ತ ಪ್ರದೇಶವಾಗಲಿದೆ.

                ಕರ್ನಾಟಕ, ಆಂಧ್ರಪ್ರದೇಶ, ಚತ್ತೀಸ್​ಗಢ ಸೇರಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಕಾಶ್ಮೀರ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವಿಜಯ ಕುಮಾರ್ ಮಾಹಿತಿ ಹಂಚಿಕೊಂಡರು. ಪ್ರಸ್ತುತ ಕಾಶ್ಮೀರ ಕಣಿವೆಯಲ್ಲಿ 81 ಸಕ್ರಿಯ ಉಗ್ರರಿದ್ದಾರೆ. ಅದರಲ್ಲಿ 29 ಸ್ಥಳೀಯ ಉಗ್ರರು ಹಾಗೂ 52 ವಿದೇಶಿ ಭಯೋತ್ಪಾದಕರು ಸೇರಿದ್ದಾರೆ. ಉಗ್ರ ಸಂಘಟನೆಗಳಿಗೆ ಸೇರುವ ಸ್ಥಳೀಯರ ಸಂಖ್ಯೆ ಶೇ.73 ಇಳಿಕೆಯಾಗಿದೆ. 2018ರಲ್ಲಿ 109 ಮಂದಿ ಸ್ಥಳೀಯ ಉಗ್ರರಿದ್ದರು. ಆದರೀಗ ಅದರ ಸಂಖ್ಯೆ ಬರೀ 29ಕ್ಕೆ ಇಳಿಕೆಯಾಗಿದೆ.

                ಕಾಶ್ಮೀರ ಕಣಿವೆಯಲ್ಲಿ ಸದ್ಯ ಬರೀ ಮೂವರು ಉಗ್ರ ಮುಖಂಡರು ಸಕ್ರಿಯರಾಗಿದ್ದಾರೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಮುಖ್ಯಸ್ಥ ಫಾರೂಕ್ ನಲ್ಲಿ, ಲಷ್ಕರ್ ಎ ತಯ್ಬಾ ಸಂಘಟನೆಯ ರಿಯಾಜ್ ಸತ್ರಿ ಮತ್ತು ಜಾವೇದ್ ಮಟ್ಟು ಇದ್ದಾರೆ. ಇದರಲ್ಲಿ ಜಾವೇದ್ ಮಟ್ಟು ಅನಾರೋಗ್ಯ ಪೀಡಿತನಾಗಿ ಭೂಗತವಾಗಿದ್ದಾನೆ. ಎರಡು ವರ್ಷಗಳ ಹಿಂದೆ 80ಕ್ಕೂ ಹೆಚ್ಚು ಟೆರರ್ ಕಮಾಂಡರ್​ಗಳು ಸಕ್ರಿಯರಾಗಿದ್ದರು. ಉಗ್ರ ಸಂಘಟನೆಗಳಿಗೆ ನೇಮಕಾತಿ ಪ್ರಮಾಣವೂ ಗಣನೀಯವಾಗಿ ತಗ್ಗಿದೆ. 2018ರಲ್ಲಿ 201 ಸ್ಥಳೀಯರು ಉಗ್ರ ಸಂಘಟನೆಗಳಿಗೆ ಸೇರ್ಪಡೆಗೊಂಡಿದ್ದರು. ಆದರೆ, ಈ ವರ್ಷ (2022) ಬರೀ 99 ಮಂದಿ ಸೇರಿರುವ ಮಾಹಿತಿ ಇದೆ ಎಂದು ವಿಜಯ ಕುಮಾರ್ ಮಾಹಿತಿ ನೀಡಿದರು.

                         2019ಕ್ಕೂ ಮುನ್ನ ತನ್ನ ಮಗ ಅಥವಾ ಕುಟುಂಬದ ಯಾವುದೇ ಸದಸ್ಯ ಭಯೋತ್ಪಾದಕ ಎನಿಸಿಕೊಂಡರೆ ಪಾಲಕರಿಗೆ ಅದು ಹೆಮ್ಮೆಯ ವಿಷಯವಾಗಿತ್ತು. ಗರ್ವದಿಂದಲೇ ತನ್ನ ಮಗ ಉಗ್ರ ಎಂದು ಹೇಳಿಕೊಳ್ಳುತ್ತಿದ್ದರು. ಆದರೀಗ ಪಾಲಕರ ಮನಃಸ್ಥಿತಿಯೂ ಬದಲಾಗಿದೆ. ಉಗ್ರ ಸಂಘಟನೆಗೆ ಮನೆಯ ಸದಸ್ಯ ಸೇರಿದರೆ. ಮೊದಲಿಗೆ ಪೊಲೀಸ್ ಠಾಣೆಗೆ ಬಂದು ಕಾಣೆಯಾಗಿರುವುದಾಗಿ ದೂರು ದಾಖಲಿಸುತ್ತಾರೆ. ನಂತರ ಅವರೇ ಖುದ್ದು ಆತನ ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಬಹುತೇಕ ಕೇಸ್​ಗಳಲ್ಲಿ ಮನವೊಲಿಸಿ ವಾಪಸ್ ಕರೆತಂದಿದ್ದಾರೆ. ಪೊಲೀಸರು ಅಸ್ತಿ ಜಪ್ತಿ ಮಾಡುವ ಭಯದಿಂದ ಮನೆ ಮಾಲೀಕರು ಸಹ ಉಗ್ರರಿಗೆ ಆಶ್ರಯ ಕೊಡಲು ಹೆದರುತ್ತಿದ್ದಾರೆ. ಸ್ಥಳೀಯರ ಉಗ್ರ ನೇಮಕಾತಿ ಕ್ಷೀಣವಾಗಲು ಇದೂ ಒಂದು ಕಾರಣವಾಗಿದೆ.

                  ಕುಟುಂಬಕ್ಕೆ ಮೃತದೇಹ ಕೊಡಲ್ಲ!: ಭದ್ರತಾ ಪಡೆಗಳಿಂದ ಹತರಾದ ಉಗ್ರರ ಮೃತದೇಹಗಳನ್ನು ಅಂತ್ಯ ಸಂಸ್ಕಾರ ನೆರವೇರಿಸಲು ಕುಟುಂಬ ಸದಸ್ಯರ ಸುಪರ್ಧಿಗೆ ಹಸ್ತಾಂತರಿಸುವ ಪದ್ಧತಿಯನ್ನು 2020ರಿಂದ ನಿಲ್ಲಿಸಲಾಗಿದೆ. ಪೊಲೀಸರೇ ಅಂತ್ಯಕ್ರಿಯೆ ಮಾಡುತ್ತಿದ್ದು, ಅದರಲ್ಲಿ ಭಾಗಿಯಾಗಲು ಕುಟುಂಬದ ಐವರು ಸದಸ್ಯರಿಗಷ್ಟೇ ಅವಕಾಶ ಕಲ್ಪಿಸಲಾಗುತ್ತದೆ.

                 2022ರಲ್ಲಿ 169 ಉಗ್ರರ ಹತ್ಯೆ: ಪೊಲೀಸರ ಮಾಹಿತಿ ಪ್ರಕಾರ 2022ರಲ್ಲಿ ಈವರೆಗೆ ಕಾಶ್ಮೀರದಲ್ಲಿ ಮಾತ್ರ 169 ಉಗ್ರರನ್ನು ಹತ್ಯೆ ಮಾಡಲಾಗಿದೆ. ಅದರಲ್ಲಿ 127 ಸ್ಥಳೀಯ ಉಗ್ರರು ಹಾಗೂ 42 ವಿದೇಶಿ ಉಗ್ರರಿದ್ದಾರೆ. ಈ ವರ್ಷ ಮೂವರು ಕಾಶ್ಮೀರಿ ಪಂಡಿತರು, ಮೂವರು ಸ್ಥಳೀಯ ಹಿಂದೂಗಳು, 6 ಮಂದಿ ಹೊರ ರಾಜ್ಯದವರು ಹಾಗೂ 17 ಮುಸ್ಲಿಂ ನಾಗರಿಕರು ಉಗ್ರ ದಾಳಿಯಲ್ಲಿ ಬಲಿಯಾಗಿದ್ದಾರೆ.

             ಡ್ರೋನ್​ಗಳಲ್ಲಿ ಸ್ಪೋಟಕ, ಡ್ರಗ್ಸ್ ರವಾನೆ! ಪಾಕಿಸ್ತಾನ ಮೂಲದ ಉಗ್ರರು ಡ್ರೋನ್​ಗಳ ಮೂಲಕ ಶಸ್ತ್ರಾಸ್ತ್ರಗಳು, ಸ್ಪೋಟಕಗಳು ಹಾಗೂ ಡ್ರಗ್ಸ್ ಪೂರೈಸುತ್ತಿದ್ದಾರೆ. ಟೆಲಿಗ್ರಾಂ ಮೂಲಕ ಬೆದರಿಕೆ ಕರೆಗಳು, ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಕಾನೂನು-ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡುತ್ತಿದ್ದಾರೆ.

               ಆನ್​ಲೈನ್ ಮೂಲಕವೇ ಯುವಕರ ಮನಃಪರಿವರ್ತಿಸಿ ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇವರನ್ನು ಹೈಬ್ರಿಡ್ ಉಗ್ರರು ಎನ್ನಬಹುದಾಗಿದ್ದು, ಇವರ ಕುರಿತ ಮಾಹಿತಿ ಪೊಲೀಸ್ ದಾಖಲೆಗಳಲ್ಲಿ ಇಲ್ಲ. ಆದರೆ, ಜಮ್ಮು-ಕಾಶ್ಮೀರದಲ್ಲಿದ್ದುಕೊಂಡೇ ಉಗ್ರ ಸಂಘಟನೆಗಳಿಗೆ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯ ಕುಮಾರ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries