HEALTH TIPS

ಅಸ್ಸಾಂ-ಮೇಘಾಲಯ ಗಡಿ: ಅರಣ್ಯ ಕಚೇರಿ ಧ್ವಂಸ, ವಾಹನ ಸಂಚಾರ ನಿರ್ಬಂಧ

 

                ಗುವಾಹಟಿ: ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳ ವಿವಾದಿತ ಗಡಿ ಪ್ರದೇಶದಲ್ಲಿ ಹಿಂಸಾಚಾರ ಸಂಭವಿಸಿ ಆರು ಜನರು ಮೃತಪಟ್ಟ ಬೆನ್ನಲ್ಲೆ ಗ್ರಾಮಸ್ಥರ ಗುಂಪೊಂದು ಮಂಗಳವಾರ ರಾತ್ರಿ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಅರಣ್ಯ ಕಚೇರಿ ಧ್ವಂಸಗೊಳಿಸಿ, ಸುಟ್ಟು ಹಾಕಿದೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

                 ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಮುಕ್ರೋಹ್ ಗ್ರಾಮದ ನಿವಾಸಿಗಳು ಅಸ್ಸಾಂನ ಖರೋನಿ ಅರಣ್ಯ ವಲಯದ ಬೀಟ್ ಕಚೇರಿ ಮುಂದೆ ಜಮಾಯಿಸಿ, ಅಂತರರಾಜ್ಯ ಗಡಿ ಭಾಗದ ಕಟ್ಟಡಕ್ಕೆ ಬೆಂಕಿ ಹಚ್ಚಿದರು. ಅರಣ್ಯ ಕಚೇರಿ ಧ್ವಂಸಗೊಳಿಸಿ, ಸಂಕೀರ್ಣದಲ್ಲಿದ್ದ ಪೀಠೋಪಕರಣಗಳು, ದಾಖಲೆಗಳು ಮತ್ತು ಮೋಟಾರ್‌ ಸೈಕಲ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

               ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲು ಗ್ರಾಮಸ್ಥರು ಅಲ್ಲಿಂದ ಹೊರಟು ಹೋಗಿದ್ದರು ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದರು.

              'ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬರುವವರೆಗೆ ಮೇಘಾಲಯಕ್ಕೆ ತೆರಳದಂತೆ ಜನರಿಗೆ ಸಲಹೆ ನೀಡಲಾಗಿದೆ. ದುಷ್ಕರ್ಮಿಗಳು ವಾಹನಗಳನ್ನು ಗುರಿಯಾಗಿಸಿಕೊಂಡಿರುವ ಕಾರಣ ಖಾಸಗಿ ಮತ್ತು ಸಣ್ಣ ಕಾರು ಮಾಲೀಕರಿಗೆ ಪ್ರಯಾಣಿಸದಂತೆ ‌ಮನವಿ ಮಾಡಲಾಗಿದೆ. ವಾಣಿಜ್ಯ ವಾಹನಗಳಿಗೆ ನಿರ್ಬಂಧ ವಿಧಿಸಿಲ್ಲ' ಎಂದು ಗುವಾಹಟಿ ಪೊಲೀಸ್ ಉಪ ಆಯುಕ್ತ (ಪೂರ್ವ) ಸುಧಾಕರ್ ಸಿಂಗ್ ಹೇಳಿದ್ದಾರೆ.

               ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನಲ್ಲಿ ಮಂಗಳವಾರ ಸಂಜೆ ದುಷ್ಕರ್ಮಿಗಳು ಪ್ರಯಾಣಿಕರನ್ನು ವಾಹನದಿಂದ ಹೊರ ಬರುವಂತೆ ಹೇಳಿ, ನಂತರ ಅಸ್ಸಾಂ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಸುಟ್ಟುಹಾಕಲಾಗಿದೆ ಎಂದು ಮೂಲಗಳು ಸುದ್ದಿಸಂಸ್ಥೆ ತಿಳಿಸಿವೆ.

              ಹಿಂಸಾಚಾರಲ್ಲಿ ಮೃತಪಟ್ಟ ಆರು ಮಂದಿ ಪೈಕಿ ಐವರು ಮೇಘಾಲಯ ನಿವಾಸಿಗಳು ಮತ್ತು ಒಬ್ಬರು ಅಸ್ಸಾಂ ಅರಣ್ಯ ರಕ್ಷಕ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ತಿಳಿಸಿದ್ದಾರೆ.

                   ಮೇಘಾಲಯ ಮತ್ತು ಅಸ್ಸಾಂ ಸರ್ಕಾರ ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದೆ.

                 ಕೇಂದ್ರಕ್ಕೆ ನಿಯೋಗ: ಉಭಯ ರಾಜ್ಯಗಳ ಗಡಿ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಮೃತಪಟ್ಟ ಘಟನೆ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆಗೆ ಒತ್ತಾಯಿಸಲು ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ನೇತೃತ್ವದ ಸಚಿವರ ನಿಯೋಗವು ನ. 24 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದೆ.

                  ವಿವಾದಿತ ಗಡಿಯಲ್ಲಿನ ಹಿಂಸಾಚಾರದ ತನಿಖೆಯನ್ನು ಕೇಂದ್ರ ಅಥವಾ ತಟಸ್ಥ ಸಂಸ್ಥೆಗೆ ಹಸ್ತಾಂತರಿಸುವುದಾಗಿ ಅಸ್ಸಾಂ ಸರ್ಕಾರ ಮಂಗಳವಾರ ಹೇಳಿದೆ.

                 'ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ತನಿಖೆಗಾಗಿ ಪೂರ್ವ ವಲಯದ ಡಿಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು. ನವದೆಹಲಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್‌ಎಚ್‌ಆರ್‌ಸಿ) ಭೇಟಿ ಮಾಡಲಾಗುವುದು' ಎಂದು ಸಂಗ್ಮಾ ಹೇಳಿದರು.

‌        ಖರ್ಗೆ ಟೀಕೆ  : ಬಿಜೆಪಿಯ ಈಶಾನ್ಯ ಪ್ರಜಸತ್ತಾತ್ಮಕ ಮೈತ್ರಿಕೂಟ (ಎನ್‌ಇಡಿಎ)         ಈಶಾನ್ಯದಲ್ಲಿ ವಿಫಲವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಪರಿಹರಿಸುವಂತೆ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

                  ‌'ಅಸ್ಸಾಂ-ಮೇಘಾಲಯ ಗಡಿ ಘಟನೆಯಿಂದ ದುಃಖಿತನಾಗಿದ್ದೇನೆ. ಆರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಶಾಂತಿ ನೆಲಸಲಿ' ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries