ನಿಮ್ಮ ಮನೆಯ ವಿದ್ಯುತ್ ಬಿಲ್ ಹೆಚ್ಚಾಗುತ್ತಿದೆಯೇ? ಸೋಲಾರ್ ವಿದ್ಯುತ್ ಇತ್ಯಾದಿ ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೂ ಪ್ರಯೋಜನವಿಲ್ಲವೇ? ಇದಕ್ಕೊಂದು ಸರಳ ಪರಿಹಾರ ಇದೀಗ ಸಿಕ್ಕಿದೆ. ಮನೆಯೇ ತನಗೆ ತಾನೇ ವಿದ್ಯುತ್ ಉತ್ಪಾದಿಸಿಕೊಳ್ಳುವ ತಂತ್ರಜ್ಞಾನವನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ.
ವಿದ್ಯುತ್ ಉಳಿತಾಯಕ್ಕಾಗಿ ಈಗ ಸಾಮಾನ್ಯವಾಗಿ ಎಲ್ಲರೂ ಲೈಟ್ ಎಮಿಟಿಂಗ್ ಡಯೋಡ್ (ಎಲ್‌ಇಡಿ) ದೀಪಗಳನ್ನು ಬಳಸುತ್ತಿರಬಹುದು. '5 ಸ್ಟಾರ್' ಪ್ರಮಾಣಪತ್ರವಿರುವ ಎಲೆಕ್ಟ್ರಾನಿಕ್ ಸಲಕರಣೆಗಳು ಮನೆಯಲ್ಲಿ ಇರಬಹುದು. ಇವೆಲ್ಲಾ ವಿದ್ಯುತ್ ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸಬಹುದೇ ಹೊರತು, ವಿದ್ಯುತ್ ಬಳಕೆಯನ್ನು ಶೂನ್ಯವಾಗಿಸಲಾರವು. ಹಣಕೊಟ್ಟು ಬಾಹ್ಯಮೂಲಗಳಿಂದ ವಿದ್ಯುತ್ ಖರೀದಿಸುವುದು ಅನಿವಾರ್ಯ. ಇದಕ್ಕೆ ಪರ್ಯಾಯವಾಗಿ ನಮ್ಮ ವಿದ್ಯುತ್ತನ್ನು ನಾವೇ ಬಳಸಿಕೊಳ್ಳುವುದು ಜಾಣ್ಮೆ ಎನ್ನುವುದು ಈಗಿನ ವಿಜ್ಞಾನಿಗಳ ಅಭಿಮತ. ಇಂಥದ್ದೇ ಒಂದು ತಂತ್ರಜ್ಞಾನದ ಅಳವಡಿಕೆಯ ಪ್ರಯತ್ನ ಇದೀಗ ಆಗಿದೆ.
ಮನೆಗಳ ಚಾವಣಿಯ ಮೇಲೆ ಸೌರಫಲಕ ಅಥವಾ ಗಾಳಿಯಂತ್ರಗಳನ್ನು ಅಳವಡಿಸುವುದು, ಕೊಂಚ ಮಟ್ಟಿಗೆ ಸ್ವಾವಲಂಬಿ ವಿದ್ಯುತ್ ಉತ್ಪಾದನೆಯನ್ನು ಮಾಡಬಲ್ಲದು. ಈ ರೀತಿಯ ಸಾಧನಗಳ ಸಾಲಿಗೆ ಕೆಲವೊಂದು ಹೊಸ ಸೇರ್ಪಡೆಗಳಾಗಿವೆ. ಈ ರೀತಿಯ ತಂತ್ರಜ್ಞಾನ ಹಾಗೂ ಸಾಧನಗಳನ್ನು ಅಳವಡಿಸಿರುವ ಮನೆಗಳನ್ನು ಈಗ 'ಜಾಣ ಮನೆಗಳು' ಎಂದೇ ಕರೆಯಲಾಗುತ್ತಿದೆ.
ಇವನ್ನು ಹೊಸ ಆವಿಷ್ಕಾರ ಎಂದು ಹೇಳುವುದಕ್ಕಿಂತ, ಹಲವು ಆವಿಷ್ಕಾರಗಳ ಅಳವಡಿಕೆ ಎಂದು ಕರೆಯುವುದು ಸೂಕ್ತವಾದೀತು. 'ಫೋಟೋವೋಲ್ಟಾಯಿಕ್ ಗ್ಲೇಜ್', 'ಕೈನೆಟಿಕ್ ಫುಟ್ ಫಾಲ್' ಹಾಗೂ 'ಕೈನೆಟಿಕ್ ರೋಡ್' ಎಂಬ ಮೂರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮನೆಯೊಂದಕ್ಕೆ ಸಾಕಾಗುವಷ್ಟು ವಿದ್ಯುತ್ತನ್ನು ತಯಾರಿಸಬಹುದಾಗಿದೆ. ಈಗಾಗಲೇ ಭಾರತವೂ ಸೇರಿದಂತೆ ವಿಶ್ವದ ಮುಂಚೂಣಿ ಗೃಹ ನಿರ್ಮಾಣ ಸಂಸ್ಥೆಗಳು ಇವನ್ನು ಅಳವಡಿಸಿಕೊಳ್ಳಲು ಶುರು ಮಾಡಿವೆ.
ಇಂಗ್ಲೆಂಡ್‌ನ ಕೇಂಬ್ರಿಜ್ ಮೂಲದ 'ಪಾಲಿ ಸೋಲಾರ್ ಟೆಕ್ನಾಲಜಿ' ಸಂಸ್ಥೆಯು 'ಫೋಟೋವೋಲ್ಟಾಯಿಕ್ ಗ್ಲೇಜ್' ತಂತ್ರಜ್ಞಾನವನ್ನು ಸುಧಾರಿಸಿ ಅದನ್ನು ಉದ್ಯಮವಾಗಿ ಪರಿವರ್ತಿಸಿದೆ. ಮುಖ್ಯವಾಗಿ ಮನೆಯ ಬಾಹ್ಯ ಗೋಡೆ ಹಾಗೂ ಚಾವಣಿಗೆ ಸೌರಶಕ್ತಿ ಉತ್ಪಾದಿಸುವ ಬಣ್ಣ ಹಾಗೂ ಉತ್ಪತ್ತಿಯಾಗುವ ವಿದ್ಯುತ್ತನ್ನು ಬ್ಯಾಟರಿಗಳಿಗೆ ರವಾನೆ ಮಾಡುವ ಹಾಗೂ ಸಂಗ್ರಹಿಸುವ ಇತರ ಎಲೆಕ್ಟ್ರಾನಿಕ್ ಹಾಗೂ ಕಂಪ್ಯೂಟರ್ ಸಾಧನಗಳನ್ನು ಈ ಸಂಸ್ಥೆ ಅಭಿವೃದ್ಧಿಪಡಿಸಿದೆ. ಕೇವಲ ಬಣ್ಣ ಮಾತ್ರವೇ ಅಲ್ಲದೇ, ಮನೆಗಳಿಗೆ ಬಳಕೆಯಾಗುವ ಕಿಟಕಿಯ ಗಾಜು, ಹೆಂಚುಗಳು- ಹೀಗೆ ಪ್ರತಿಯೊಂದರಲ್ಲೂ 'ಫೋಟೋವೋಲ್ಟಾಯಿಕ್' ತಂತ್ರಜ್ಞಾನವನ್ನು ಅಳವಡಿಸಿರುವುದು ಇಲ್ಲಿನ ವಿಶೇಷ.
ಇದರ ಕಾರ್ಯವೈಖರಿಯೂ ಸರಳವಾಗಿದೆ. ಗೋಡೆಗಳ ಮೇಲೆ ಬೀಳುವ ಬೆಳಕು ವಿದ್ಯುತ್ತಾಗಿ ಪರಿವರ್ತನೆಯಾಗುತ್ತದೆ. ಬಳಿಕ ಅದು ಬ್ಯಾಟರಿಗಳಿಗೆ ರವಾನೆಯಾಗುತ್ತದೆ. ಕೇವಲ ಮನೆ ಮಾತ್ರವಲ್ಲದೇ ಮನೆಯ ಅಂಗಳ, ತೋಟ - ಅಕ್ಷರಶಃ ಎಲ್ಲಿ ಬೇಕಾದರೂ ವಿದ್ಯುತ್ ತಯಾರಿಸುವ ಅವಕಾಶ ಇದರಲ್ಲಿದೆ.
ಇದಕ್ಕಿಂತ ವಿಶೇಷವಾದ ತಂತ್ರಜ್ಞಾನ ಅಳವಡಿಕೆಯೆಂದರೆ, ಅದು 'ಕೈನೆಟಿಕ್ ಫುಟ್ ಫಾಲ್'. ಮನೆಯ ಸದಸ್ಯರು ಮನೆಯೊಳಗೆ ಹಾಗೂ ಹೊರಗೆ ನಡೆದಾಡುವುದು ವ್ಯರ್ಥವಾದರೆ ಹೇಗೆ? ಹೆಜ್ಜೆಗಳನ್ನೇ ವಿದ್ಯುತ್ತಾಗಿ ಪರಿವರ್ತಿಸುವ ತಂತ್ರಜ್ಞಾನವಿದು. ಪ್ರತಿ ಹೆಜ್ಜೆ ಇಡುವಾಗಲೂ ದೇಹದ ತೂಕ ನೆಲದ ಮೇಲೆ ಬೀಳುತ್ತದೆ. ಆ ತೂಕವನ್ನೇ ವಿದ್ಯುತ್ತಾಗಿ ಪರಿವರ್ತಿಸುವ ವಿಧಾನವಿದು. ಇಂಗ್ಲೆಂಡ್‌ನ ಲಂಡನ್ ಮೂಲದ 'ಪೇವ್‌ಜೆನ್' ಎಂಬ ಸಂಸ್ಥೆಯು ಈ ತಂತ್ರಜ್ಞಾನವನ್ನು ವಾಣಿಜ್ಯೀಕರಿಸಿದೆ.
ಸಂಶೋಧಕರಾದ ಲಾರೆನ್ಸ್ ಕಿಂಬಲ್ - ಕುಕ್ ಇದರ ಬೆನ್ನೆಲುಬು. ಇವರದೇ ಆವಿಷ್ಕಾರವಿದು. ಭಾರತದಲ್ಲೂ ಇದು ಈಗಾಗಲೇ ಲಭ್ಯವಿದೆ. ನಮ್ಮ ನೆಲದ ಮೇಲೆ ಹಾಸುವ ಟೈಲ್‌ಗಳಂತೆಯೇ ಇವು ಇರುತ್ತದೆ. ಆದರೆ, ಸದ್ಯಕ್ಕಂತೂ ಭಾರತೀಯರಿಗೆ ಇದು ಬಲು ದುಬಾರಿ - ಒಂದು ಚದರ ಅಡಿ ಟೈಲ್ 75 ಡಾಲರ್ ಆರಂಭಿಕ ಬೆಲೆಯಿದೆ. ಆದರೂ, ಭಾರತದ ಹಲವರು ತಮ್ಮ ಮನೆಗಳಲ್ಲಿ ಇದನ್ನು ಅಳವಡಿಸಿಕೊಂಡಿದ್ದಾರೆ.
ಇದರ ಜೊತೆಗೆ, ಇಟಲಿಯ ಮಿಲನ್‌ನಲ್ಲಿರುವ ಪಾಲಿಟೆಕ್ನಿಕ್ ಯೂನಿವರ್ಸಿಟಿ ವಿಜ್ಞಾನಿಗಳು 'ಕೈನೆಟಿಕ್ ರೋಡ್' ಎಂಬ ಸಂಶೋಧನೆ ಮಾಡಿದ್ದಾರೆ. ರಸ್ತೆಗಳ ಮೇಲೆ ಸಂಚರಿಸುವ ವಾಹನಗಳ ತೂಕವನ್ನು ವಿದ್ಯುತ್ತಾಗಿ ಪರಿವರ್ತಿಸುವ ವಿಧಾನವಿದು. ಬಹುತೇಕ 'ಕೈನೆಟಿಕ್ ಫುಟ್ ಫಾಲ್'ನಂತೆಯೇ ಕಾರ್ಯವೈಖರಿ. ಇದನ್ನು ಮನೆಯ ಸುತ್ತಲಿನ ಜಾಗದಲ್ಲಿ ಅಳವಡಿಸಿಕೊಳ್ಳಲೂಬಹುದು.
'ಪೇವ್‌ಜೆನ್' ಸಂಸ್ಥಾಪಕ ಕಿಂಬಲ್ ಸ್ವಚ್ಛ ಪರಿಸರದ ಕನಸು ಕಂಡವರು. ಅವರ ಪ್ರಕಾರ 'ಈ ಮೂರೂ ತಂತ್ರಜ್ಞಾನಗಳು ಪರಿಪೂರ್ಣವಾಗಿ ಮನೆಗಳನ್ನು ವಿದ್ಯುತ್ ಸ್ವಾಬಲಂಬಿಯಾಗಿ ಮಾಡಬಲ್ಲವು. ವಿದ್ಯುತ್ ಪರಿಸರದ ಉಚಿತ ಕೊಡುಗೆ. ಅದನ್ನು ಹಣ ಕೊಟ್ಟು ಕೊಳ್ಳಬೇಕಾಗಿಲ್ಲ. ಈ ಸಾಧನಗಳನ್ನು ಜನಸಾಮಾನ್ಯರು ತಯಾರಿಸಿಕೊಳ್ಳಲು ಸಾಧ್ಯವಾಗದ ಕಾರಣ, ಮೊದಲ ಬಾರಿಗೆ ಕೊಳ್ಳಬೇಕಷ್ಟೇ. ಅಲ್ಲದೇ, ಕೊಳ್ಳುವವರ ಸಂಖ್ಯೆ ಹೆಚ್ಚಾದಂತೆ, ಇವುಗಳ ಬೆಲೆಯೂ ಕಡಿಮೆಯಾಗುತ್ತದೆ. ಇದು ಭವಿಷ್ಯದಲ್ಲಿ ಸ್ವಚ್ಛ ಪರಿಸರ ಸ್ಥಾಪನೆಗೂ ಮುನ್ನುಡಿ ಹಾಕಲಿದೆ' ಎಂದು ಹೇಳಿದ್ದಾರೆ.