ತಿರುವನಂತಪುರಂ: ಕೇರಳದ ವಿಜಿಂಗಂನಲ್ಲಿ ಅದಾನಿ ಅಂತಾರಾಷ್ಟ್ರೀಯ ಬಂದರು ನಿರ್ಮಾಣದ ಶನಿವಾರ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಒಂಬತ್ತು ಪ್ರಕರಣ ದಾಖಲಿಸಿದ್ದಾರೆ.
ನಿರ್ಮಾಣ ಹಂತದಲ್ಲಿರುವ ವಿಜಿಂಗಂ ಬಂದರಿನ ಮುಂದೆ ಶನಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇರಳ ಹೈಕೋರ್ಟ್‌ಗೆ ನೀಡಿದ ಭರವಸೆಯನ್ನು ಮರೆತು ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದರು.
ಬಂದರಿಗೆ ಯಾವುದೇ ರೀತಿಯ ವಾಹನಗಳನ್ನು ತಡೆಯುವುದಿಲ್ಲ ಎಂದು ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ನೇತೃತ್ವದ ಪ್ರತಿಭಟನಾಕಾರರು ಇದೇ 22 ರಂದು ಹೈಕೋರ್ಟ್ ಗೆ ಭರವಸೆ ನೀಡಿದ್ದರು. ಆದರೆ, ಪ್ರತಿಭಟನೆ ವೇಳೆ ಕೆಲ ಸ್ಥಳೀಯರು ಯೋಜನೆ ಬೆಂಬಲಿಸಿದ್ದರಿಂದ ಸಣ್ಣ ಪ್ರಮಾಣದ ಘರ್ಷಣೆಯಾಗಿತ್ತು.
'ಪ್ರತಿಭಟನೆ ವೇಳೆ ಸಣ್ಣ ಪ್ರಮಾಣದ ಘರ್ಷಣೆ ನಡೆದಿದ್ದು, ಇದೀಗ ಪ್ರತಿಭಟನಾಕಾರರ ವಿರುದ್ಧ 9 ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಕೆಲವು ಚರ್ಚ್ ಗಳ ಪಾದ್ರಿಗಳ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.