ನಾಗ್ಪುರ: 'ವಿದೇಶೀಯರ ಆಕ್ರಮಣದಿಂದ ಆಯುರ್ವೇದದ ಪ್ರಸಾರ ನಿಂತಿತ್ತು. ಈ ಪ್ರಚೀನ ವೈದ್ಯಕೀಯ ಪದ್ಧತಿಗೆ ಈಗ ಮತ್ತೆ ಮನ್ನಣೆ ಸಿಗುತ್ತಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ಹೇಳಿದರು.
ಕೇಂದ್ರ ಆಯುಷ್ ಸಚಿವಾಲಯವು ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಸಮ್ಮೇಳನ 'ಆಯುರ್ವೇದ ಪರ್ವ'ದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರಕಿಸಲು ಕ್ರಮ ಕೈಗೊಳ್ಳಬೇಕು. ಎಲ್ಲರಿಗೂ ಸುಲಭಕ್ಕೆ ಎಟಕುವ ಮತ್ತು ಸರಳವಾದ ವೈದ್ಯಕೀಯ ಚಿಕಿತ್ಸೆ ದೊರಕುವಂತೆ ಆಗಬೇಕು. ಈ ನಿಟ್ಟಿನಲ್ಲಿ ಆಯುರ್ವೇದಕ್ಕಿಂತ ಮತ್ತೊಂದು ಉತ್ತಮ ವೈದ್ಯಕೀಯ ಪದ್ಧತಿ ಇಲ್ಲ. ಇದರಿಂದ ಆಯುರ್ವೇದ ಪದ್ಧತಿಯನ್ನೂ ಮುಂದುವರಿಸಿಕೊಂಡು ಹೋದಂತಾಗುತ್ತದೆ' ಎಂದು ಹೇಳಿದರು.
ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮಾತನಾಡಿ, ಕಳೆದ ಏಳು ವರ್ಷಗಳಿಂದ ಆಯುರ್ವೇದವು ಜಾಗತಿಕ ಮನ್ನಣೆ ಪಡೆಯುತ್ತಿದೆ ಎಂದರು. ಆಯುಷ್ ಸಚಿವಾಲಯವನ್ನು ಸ್ಥಾಪಿಸಿ ಆಯುರ್ವೇದಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದರು. 2014ರ ವರೆಗೆ ಆಯುಷ್ ಉದ್ಯಮದ ಮಾರುಕಟ್ಟೆ ವ್ಯಾಪ್ತಿ ₹2.14 ಲಕ್ಷ ಕೋಟಿ ಇತ್ತು. ಕಳೆದ 8 ವರ್ಷಗಳಲ್ಲಿ ₹14.57 ಲಕ್ಷ ಕೋಟಿಗೆ ತಲುಪಿದೆ. 2023ರ ವೇಳೆಗೆ 18.51 ಲಕ್ಷ ಕೋಟಿಗೆ ತಲುಪಲಿದೆ. ಆಯುರ್ವೇದವು ಅಚ್ಛೇದಿನವನ್ನು ಕಾಣುತ್ತಿದೆ ಎಂದು ಅವರು ಹೇಳಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.