ಬದಿಯಡ್ಕ: ಬದಿಯಡ್ಕ ಪೇಟೆಯಲ್ಲಿ ದಂತವೈದ್ಯಕೀಯ ಕ್ಲಿನಿಕ್ ನಡೆಸುತ್ತಿರುವ ಬದಿಯಡ್ಕ ಮೇಲಿನ ಪೇಟೆ ನಿವಾಸಿ, ದಂತ ವೈದ್ಯ ಡಾ. ಕೃಷ್ಣಮೂರ್ತಿ ಅವರ ನಾಪತ್ತೆ ಪ್ರಕರಣ ಭೇದಿಸುವಂತೆ ಹವ್ಯಕ ಸಭಾ ಹಾಗೂ ನಾಗರಿಕರು ಗುರುವಾರ ಬದಿಯಡ್ಕ ಠಾಣೆ ಎದುರು ಪ್ರತಿಭಟನೆ ನಡೆಸಿದ್ದು, ಈ ಮಧ್ಯೆ ಕುಂದಾಪುರ ಸನಿಹದ ಹಟ್ಟಿಯಂಗಡಿ ಬಳಿ ಅಪರಿಚಿತ ಪುರುಷ ಮೃತದೇಹ ರೈಲು ಡಿಕ್ಕಿಯಾದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತದೇಹ ಛಿದ್ರಗೊಂಡ ಹಿನ್ನೆಲೆಯಲ್ಲಿ ಗುರುತುಪತ್ತೆ ಕಾರ್ಯ ಮುಂದುವರಿದಿದೆ.
ಬದಿಯಡ್ಕದಲ್ಲಿ ದಂತ ವೈದ್ಯರಾಗಿರುವ ಡಾ. ಕೃಷ್ಣಮೂರ್ತಿ, ಮಂಗಳವಾರ ಮಧ್ಯಾಹ್ನದಿಂದ ತಮ್ಮ ಕ್ಲಿನಿಕ್‍ನಿಂದ ನಾಪತ್ತೆಯಾಗಿರುವ ಬಗ್ಗೆ ಪತ್ನಿ ನೀಡಿದ ದೂರಿನನ್ವಯ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಇವರ ಮೊಬೈಲ್, ಎಟಿಎಂ ಒಳಗೊಂಡ ಪರ್ಸ್ ಕ್ಲಿನಿಕ್‍ನಲ್ಲೇ ಬಿಟ್ಟಿದ್ದು, ಹುಡುಕಾಟದ ಮಧ್ಯೆ ಇವರ ಬೈಕ್ ಕುಂಬಳೆಯಲ್ಲಿ ವಾರಸುದಾರರಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೈದ್ಯರ ನಾಪತ್ತೆ ಬಗ್ಗೆ ಕೇರಳ ಹಾಗೂ ಕರ್ನಾಟಕದ ಪೊಲೀಸ್ ಠಾಣೆಗಳಿಗೂ ಮಾಹಿತಿ ರವಾನಿಸಲಾಗಿತ್ತು.
ನಿಗೂಢ ನಾಪತ್ತೆ:
ಕಳೆದ ಹಲವು ವರ್ಷಗಳಿಂದ ಬದಿಯಡ್ಕ ಪೇಟೆಯಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಕೃಷ್ಣಮೂರ್ತಿ ಅವರ ನಿಗೂಢ ನಾಪತ್ತೆ ಬಗ್ಗೆ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ವೈದ್ಯರ ವಿರುದ್ಧ ಭಾರಿ ಸಂಚು ರೂಪಿಸಲಾಗುತ್ತಿದೆ ಎಂಬ ದೂರೂ ಕೇಳಿ ಬಂದಿತ್ತು. ವೈದ್ಯರ ನಾಪತ್ತೆ ಬಗ್ಗೆ ಇವರ ಪತ್ನಿ ದೂರು ದಾಖಲಿಸುತ್ತಿದ್ದಂತೆ, ಮಧ್ಯ ವಯಸ್ಕ ಗೃಹಿಣಿಯೊಬ್ಬರು ವೈದ್ಯರಿಂದ ತನಗೆ ವಂಚನೆಯಾಗಿರುವುದಾಗಿ ಸಲ್ಲಿಸಿದ ದೂರಿನ ಬಗ್ಗೆ ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಏನಿದೆ ನಿಗೂಢತೆ: ಶನಿವಾರ ಚಿಕಿತ್ಸೆಗೆ ಬಂದ ಮಹಿಳೆಯೋರ್ವರಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ತಂಡವೊಂದು ಶನಿವಾರ ಬಳಿಕ ಸೋಮವಾರ ಅವರ ಕ್ಲಿನಿಕ್‍ಗೆ ಆಗಮಿಸಿದ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಮಂಗಳವಾರವೂ ದೊಡ್ಡ ಪುಡಾರಿಗಳ ಮತ್ತೊಂದು ತಂಡ ಆಗಮಿಸಿ ವ್ಯಾಪಕ ದಾಂಧಲೆ ಸೃಷ್ಟಿಸಿ ಹಿಗ್ಗಾಮುಗ್ಗ ನಿಂದಿಸಿ, ಬೆದರಿಕೆಯೊಡ್ಡಿದ ಘಟನೆಯೂ ನಡೆದಿತ್ತು. ಇದಾದ ಅಲ್ಪ ಹೊತ್ತಿನ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಬಳಿಕ ವೈದ್ಯರ ಬೈಕ್ ಕುಂಬಳೆ ಟೆಂಪಲ್ ರೋಡ್ ನಲ್ಲಿ ಉಪೇಕ್ಷಿತ ಸ್ಥಿತಿಯ್ಲಿ ನಿನ್ನೆ ಪತ್ತೆಯಾಗಿತ್ತು.
ಈ ಮಧ್ಯೆ ಮುಂದುವರಿದ ಹುಡುಕಾಟದಲ್ಲಿ ಕುಂದಾಪುರ ಹಟ್ಟಿಯಂಗಡಿಯ ರೈಲ್ವೆ ಹಳಿಯಲ್ಲಿ ಇಂದು ಪತ್ತೆಯಾಗಿರುವ ಮೃತದೇಹದ ಡಾ. ಕೃಷ್ಣ ಮೂರ್ತಿ ಅವರದ್ದೆಂದು ಸಂಶಯಿಸಲಾಗಿದ್ದು ಗುರುತು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.
ವ್ಯಾಪಕ ಪ್ರತಿಭಟನೆ:
ವೈದ್ಯರ ನಾಪತ್ತೆ ಪ್ರಕರಣ ಭೇದಿಸುವಂತೆ ಹವ್ಯಕ ಸಭಾ ಹಾಗೂ ನಾಗರಿಕರು ಬದಿಯಡ್ಕ ಠಾಣೆ ಎದುರು ಪ್ರತಿಭಟನಾ ಧರಣಿ ನಡೆಸಿದರು. ವೈದ್ಯರ ಪತ್ತೆಗೆ ಆಗ್ರಹಿಸಿ ಭಾರತೀಯ ದಂತ ವೈದ್ಯರ ಸಂಘಟನೆ ಕಾಸರಗೋಡು ಜಿಲ್ಲಾ ಘಟಕ ವತಿಯಿಂದ ವೈದ್ಯರ ವಿರುದ್ಧದ ದೌರ್ಜನ್ಯ ಕೊನೆಗೊಳಿಸುವಂತೆ ಒತ್ತಾಯಿಸಿ ಡಾ. ಕೃಷ್ಣಮೂರ್ತಿ ಅವರ ಬದಿಯಡ್ಕದ ಕ್ಲಿನಿಕ್ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಘಟಕ ಅಧ್ಯಕ್ಷ ಡಾ. ವಿಕ್ರಂ, ಕಾರ್ಯದರ್ಶಿ ಡಾ.ಅಜಿತೇಶ್ ಮುಂತಾದವರು ಪಾಲ್ಗೊಂಡಿದ್ದರು.
ಲ್ಯಾಂಡ್ ಮಾಫಿಯಾ ಶಂಕೆ:
ಬದಿಯಡ್ಕದ ಹೃದಯ ಭಾಗದಲ್ಲಿ ದಶಕಗಳಿಂದ ಸ್ವಂತಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ಮೇಲೆ ಒಂದು ವಿಭಾಗದ ಕೆಂಗಣ್ಣು ಇತ್ತೀಚೆಗಿನಿಂದ ಇತ್ತೆನ್ನಲಾಗುತ್ತಿದೆ. ವೈದ್ಯರಿರುವ ಸ್ಥಳವನ್ನು ವಶಪಡಿಸುವ ಹುನ್ನಾರ ಈ ಘಟನೆಯ ಹಿಂದಿದೆ ಎನ್ನಲಾಗಿದೆ. ಅದರೊಂದಿಗೆ ವ್ಯದ್ಯರನ್ನು ಬೆದರಿಸಿ ಹಣ ದೋಚುವ ಚಿಂತೆಯೂ ಇಲ್ಲದಿಲ್ಲ ಎಂದು ಭಾವಿಸಬಹುದಾಗಿದ್ದು, ಇದರ ಹಿಂದೆ ಗ್ರಾ.ಪಂ. ಆಡಳಿತ ವಿಭಾಗದ ನಾಯಕನೋರ್ವ ಬೆನ್ನೆಲುಬಾಗಿರುವನೆಂಬ ವದಂತಿ ದಟ್ಟವಾಗಿದೆ.