ನವದೆಹಲಿ: ವಿಮಾ ಕಂಪನಿಗಳ ನೋಂದಾವಣೆ ಹಾಗೂ ಅವುಗಳಲ್ಲಿ ಹೂಡಿಕೆಯ ನಿಯಮಗಳನ್ನು ಸರಳೀಕರಿಸಲು ತಂದಿರುವ ತಿದ್ದುಪಡಿಗಳಿಗೆ ಭಾರತ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಅನುಮೋದನೆ ನೀಡಿದೆ. ಈ ತಿದ್ದುಪಡಿಗಳ ನಂತರ, ಖಾಸಗಿ ಬಂಡವಾಳ (ಪ್ರೖೆವೇಟ್ ಈಕ್ವಿಟಿ-ಪಿಇ) ನಿಧಿಯನ್ನು ಈಗ ವಿಮಾ ಕಂಪನಿಗಳಲ್ಲಿ ನೇರವಾಗಿ ಸ್ಥಾಪಿಸ ಬಹುದಾಗಿದೆ.
ವಿಶೇಷ ಉದ್ದೇಶದ ವ್ಯವಸ್ಥೆ (ಎಸ್ಪಿವಿ) ಮೂಲಕ ಅವರು ಮಾಡುವ ಹೂಡಿಕೆ ಐಚ್ಛಿಕ ಮಾಡಲಾಗಿದೆ.
ಇದು ವಿಮಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಪಿಇಗಳ ದೀರ್ಘಕಾಲದ ಬೇಡಿಕೆಯಾಗಿತ್ತು. ಹೊಸ ನಿಯಮದ ಪ್ರಕಾರ ವಿಮಾ ಕಂಪನಿಯಲ್ಲಿ ಶೇಕಡ 25ರಷ್ಟು ಹೂಡಿಕೆ ಮಾಡುವ ಏಕ ವ್ಯಕ್ತಿಯನ್ನು 'ಹೂಡಿಕೆದಾರ' ಮತ್ತು ಅದಕ್ಕಿಂತ ಹೆಚ್ಚಿಗೆ ಹೂಡುವವರನ್ನು 'ಪ್ರವರ್ತಕ' ಎಂದು ವರ್ಗೀಕರಿಸಲಾಗುತ್ತದೆ.
ಡಿ.17ಕ್ಕೆ ಜಿಎಸ್ಟಿ ಮಂಡಳಿ ಸಭೆ
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ 48ನೇ ಸಭೆ ಡಿಸೆಂಬರ್ 17ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆಯಲಿದೆ ಎಂದು ಮಂಡಳಿ ತಿಳಿಸಿದೆ. ಕ್ಯಾಸಿನೊ, ಕುದುರೆ ರೇಸ್, ಆನ್ಲೈನ್ ಗೇಮ್ಳಿಗೆ ತೆರಿಗೆ ವಿಧಿಸುವ ಕುರಿತು ಮತ್ತು ತೆರಿಗೆ ಸ್ಲ್ಯಾಬ್ಗಳನ್ನು ಪರಿಷ್ಕರಣೆ ಮಾಡುವ ಬಗ್ಗೆ ಎರಡು ಸಮಿತಿಗಳು ವರದಿ ಸಲ್ಲಿಸುವ ನಿರೀಕ್ಷೆ ಇದ್ದು, ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಜೂನ್ನಲ್ಲಿ ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ಎಲ್ಇಡಿ ಲ್ಯಾಂಪ್, ಸೌರ ವಾಟರ್ ಹೀಟರ್ಗಳು ಮತ್ತು ವಿವಿಧ ಜಾಬ್ ವರ್ಕ್ಗಳ ಜಿಎಸ್ಟಿಯನ್ನು ಏರಿಕೆ ಮಾಡಲಾಗಿತ್ತು. ಮುದ್ರಣ, ಬರೆಯುವ ಹಾಗೂ ಡ್ರಾಯಿಂಗ್ ಶಾಯಿಗಳ ಬೆಲೆಗಳು ಕೂಡ ಹೆಚ್ಚಳಗೊಂಡಿವೆ.