ತಿರುವನಂತಪುರಂ: ಗುರುವಾರ ಬೆಳಿಗ್ಗೆಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನ ಎರಡು ತಿಂಗಳ ಮಟ್ಟಿಗೆ ಭಕ್ತಾದಿಗಳ ದರ್ಶನಕ್ಕೆ ತೆರೆದಿದೆ. ದೇವಸ್ಥಾನದ ಅರ್ಚಕರು ಬುಧವಾರ ಸಂಜೆ ಐದು ಗಂಟೆಗೆ ದೇವಸ್ಥಾನಕ್ಕೆ ಬಂದಾಗ ಪೂರ್ಣಾಹುತಿ ಪ್ರಾರಂಭವಾಯಿತು.
ಭಕ್ತಾದಿಗಳಿಗೆ ಗುರುವಾರ ಬೆಳಗ್ಗೆ ಐದು ಗಂಟೆಯಿಂದ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.
ವೇಳಾಪಟ್ಟಿಯ ಪ್ರಕಾರ, ಪ್ರಸಕ್ತ ವರ್ಷದ ಮೊದಲ ಹಂತ ಡಿಸೆಂಬರ್ 27ಕ್ಕೆ ಅಂತ್ಯಗೊಳ್ಳುತ್ತದೆ. ಡಿಸೆಂಬರ್ 30ಕ್ಕೆ ಎರಡನೇ ಹಂತ ಪ್ರಾರಂಭವಾಗುತ್ತದೆ. ಧಾರ್ಮಿಕ ಆಚರಣೆಗಳು ಜನವರಿ 14ಕ್ಕೆ ಮುಗಿಯತ್ತವೆ. ಅಂದು 'ಮಕರ ವಿಳಕ್ಕು' (ಆಕಾಶದಲ್ಲಿ ಬೆಳಕು) ಸೂರ್ಯಾಸ್ತದ ನಂತರ ಮೂರು ಬಾರಿ ದಿಗಂತದಲ್ಲಿ ಕಾಣಿಸಿಕೊಳ್ಳುತ್ತದೆ. ಮಕರ ಬೆಳಕಿನ ಜತೆ ಬೆಟ್ಟದ ತುದಿಯಲ್ಲಿ 'ಸ್ವಾಮಿಯೇ ಶರಣಂ ಅಯ್ಯಪ್ಪ' ನಿನಾದ ಪ್ರತಿಧ್ವನಿಸುತ್ತದೆ.
ಶಬರಿಮಲೆ ದೇವಸ್ಥಾನ ತಿರುವನಂತಪುರಂನಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಪಟ್ಟಣಂತಿಟ್ಟ ಜಿಲ್ಲೆಯ ಪಂಬಾದಿಂದ ನಾಲ್ಕು ಕಿಲೋಮೀಟರ್ ದೂರ ಎತ್ತರದ ಪ್ರದೇಶದಲ್ಲಿದೆ. ಇದು ಪಶ್ಚಿಮ ಘಟ್ಟಗಳ ಪರ್ವತದ ಮಧ್ಯದಲ್ಲಿದ್ದು, ಸಮುದ್ರ ಮಟ್ಟದಿಂದ 914 ಮೀಟರ್ ಎತ್ತರದಲ್ಲಿದೆ. ಈ ಪವಿತ್ರ ದೇಗುಲಕ್ಕೆ ಹೊರಡುವ ಮೊದಲು, ಭಕ್ತಾದಿಗಳು 41 ದಿನಗಳ ಕಠಿಣ ವ್ರತ ಮಾಡಬೇಕು. ಸಸ್ಯಹಾರಿ ಆಹಾರವನ್ನು ಮಾತ್ರ ಸೇವಿಸಬೇಕು, ಕಪ್ಪು ಪಂಚೆಯನ್ನು ಧರಿಸುವುದರೊಂದಿಗೆ ಬರಿಗಾಲಿನಲ್ಲಿ ನಡೆಯಬೇಕು.
ಪ್ರತಿ ಭಕ್ತನು ಕೂಡ ಒಂದು ಚೀಲವನ್ನು(ಅಲ್ಮುಡಿ) ತಲೆಯ ಮೇಲೆ ಹೊತ್ತಿರಬೇಕು. ಅಲ್ಮುಡಿ ಇರದೆ ಸನ್ನಿಧಾನದಲ್ಲಿರುವ ಪವಿತ್ರವಾದ 18 ಮೆಟ್ಟಿಲುಗಳನ್ನು ಹತ್ತಲು ಅನುಮತಿ ಇಲ್ಲ. ಪಂಬದಿಂದ ದೇವಸ್ಥಾನಕ್ಕೆ ಕಾಲ್ನಡಿಗೆ ಮೂಲಕವೇ ಹೋಗಬೇಕು.