ನವದೆಹಲಿ: ಬಲಗೈಯಲ್ಲಿ ಧಾರ್ಮಿಕ ಚಿಹ್ನೆಯ ಟ್ಯಾಟೂ (ಹಚ್ಚೆ) ಹೊಂದಿದ್ದ ಕಾರಣಕ್ಕೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಇತರ ರಕ್ಷಣಾ ಪಡೆಗಳ ನೇಮಕಾತಿಯಲ್ಲಿ ಅವಕಾಶ ಸಿಗದಿರುವುದನ್ನು ಪ್ರಶ್ನಿಸಿ ಅಭ್ಯರ್ಥಿಯೊಬ್ಬರು ಹೈಕೋರ್ಟ್ ಮೊರೆಹೋಗಿದ್ದಾರೆ.
'ಬಲಗೈ ಸೆಲ್ಯೂಟ್ (ಗೌರವ ಸಲ್ಲಿಸಲು) ಮಾಡುವ ಕೈ ಆಗಿದೆ. ಗೃಹ ವ್ಯವಹಾರಗಳ ಸಚಿವಾಲಯದ ಮಾರ್ಗಸೂಚಿಗಳಡಿ ಬಲಗೈಗೆ ಹಚ್ಚೆ ಹಾಕಿಸಿಕೊಳ್ಳಲು ಅನುಮತಿ ಇಲ್ಲ' ಎಂದು ಸಂಬಂಧಿಸಿದ ಇಲಾಖೆಗಳ ಪರ ವಕೀಲರು ವಾದಿಸಿದರು.
'ಸಣ್ಣ ಲೇಸರ್ ಶಸ್ತ್ರಚಿಕಿತ್ಸೆ ಮೂಲಕ ಹಚ್ಚೆ ತೆಗೆಸಲು ಬದ್ಧವಾಗಿರುವುದಾಗಿ ಅರ್ಜಿದಾರ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಆತ ಸಮಗ್ರ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದು, ಆತನಲ್ಲಿ ಯಾವುದೇ ವೈದ್ಯಕೀಯ ದೋಷಗಳು ಕಂಡುಬಂದಿಲ್ಲವೆಂದು ಪರೀಕ್ಷಾ ವರದಿ ದೃಢಪಡಿಸಿದೆ' ಎಂದು ಪ್ರತಿವಾದಿ ವಕೀಲರಿಗೆ ಕೋರ್ಟ್ ತಿಳಿಸಿತು.
ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೇತ್ ಮತ್ತು ಸೌರಭ್ ಬ್ಯಾನರ್ಜಿ ಅವರಿದ್ದ ಪೀಠವು, ಹಚ್ಚೆ ತೆಗೆಸಿಕೊಂಡ ನಂತರ ಸಂಬಂಧಿಸಿದ ಇಲಾಖೆಗಳು ರಚಿಸಿದ ಹೊಸ ವೈದ್ಯಕೀಯ ಮಂಡಳಿಯ ಎದುರು ಪರೀಕ್ಷೆಗೆ ಹಾಜರಾಗಲು ಅರ್ಜಿದಾರನಿಗೆ ಅವಕಾಶ ನೀಡಿ, ಅರ್ಜಿ ವಿಲೇವಾರಿ ಮಾಡಿತು.
ಎನ್‌ಐಎ, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್ ಪಡೆಯ ಜಿಡಿ ರೈಫಲ್‌ಮನ್ ಪರೀಕ್ಷೆ ಮತ್ತು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ಕಾನ್‌ಸ್ಟೆಬಲ್ (ಸಾಮಾನ್ಯ ಕರ್ತವ್ಯ) ಹುದ್ದೆಗಳಿಗೆ ಆಯ್ಕೆಯಾಗಿದ್ದ ಅಭ್ಯರ್ಥಿಯನ್ನು ಬಲಗೈ ಮೇಲೆ ಧಾರ್ಮಿಕ ಚಿಹ್ನೆಯ ಹಚ್ಚೆ ಇರುವ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹಗೊಳಿಸಲಾಗಿತ್ತು. ಅನರ್ಹಗೊಂಡಿದ್ದ ವೈದ್ಯಕೀಯ ವಿದ್ಯಾರ್ಥಿ ಎರಡು ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳನ್ನು ರದ್ದುಪಡಿಸಿ, ಹುದ್ದೆಗಳಿಗೆ ನೇಮಕ ಮಾಡುವಂತೆ ಅಭ್ಯರ್ಥಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.