ಭೋಪಾಲ್: ಭಾರತ್ ಜೋಡೋ ಯಾತ್ರೆಯ ವೇಳೆ ಮಧ್ಯಪ್ರದೇಶದ ಇಂದೋರ್ ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಿದ್ದು ಗಾಯಗೊಂಡಿದ್ದಾರೆ. ಕಾಲ್ತುಳಿತದಲ್ಲಿ ಸಿಲುಕಿದ ವೇಣುಗೋಪಾಲ್ ಕೈ ಮತ್ತು ಮೊಣಕಾಲಿಗೆ ಗಾಯಗಳಾಗಿವೆ.
ಮಧ್ಯಪ್ರದೇಶದ ಇಂದೋರ್‌ನಲ್ಲಿ ಯಾತ್ರೆ ಸಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ವೇಣುಗೋಪಾಲ್‍ರನ್ನು ತಳ್ಳಿಕೊಂಡು ಅಭಿಮಾನಿಗಳು ನುಗ್ಗಿದ್ದಾರೆ. ಈ ವೇಳೆ ಬಿದ್ದ ವೇಣುಗೋಪಾಲ್ ಮೊಣಕಾಲು ಮತ್ತು ಕೈಗೆ ಗಾಯ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಉತ್ಸುಕರಾದ ಜನರು ಧಾವಿಸಿದ್ದರಿಂದ ಜನಸಂದಣಿ ಉಂಟಾಗಿದೆ. ಆದರೆ ಪೊಲೀಸರು ಗುಂಪನ್ನು ನಿಯಂತ್ರಿಸಲು ವಿಫಲರಾದರು. ಹೀಗಾಗಿ ಇದು ಕಾಲ್ತುಳಿತಕ್ಕೆ ಕಾರಣವಾಯಿತು.
ವೇಣುಗೋಪಾಲ್ ಅವರು ಭಾರತ್ ಜೋಡೋ ಯಾತ್ರೆಗಾಗಿ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.