ನವದೆಹಲಿ: ರೈಲ್ವೆ ಇಲಾಖೆಯ 80,000 'ಫೀಲ್ಡ್ ಆಫೀಸರ್'ಗಳ ವೇತನ ಶ್ರೇಣಿಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರಕಟಿಸಿದರು.
ತಮ್ಮ ಉದ್ಯೋಗದಲ್ಲಿ ವೇತನ ಶ್ರೇಣಿ ಸುಧಾರಣೆಗೆ ಅವಕಾಶವಿಲ್ಲದೆ ಪರಿತಪಿಸುತ್ತಿದ್ದ ಸುಮಾರು 80 ಸಾವಿರ ರೈಲ್ವೆ ನೌಕರರಿಗೆ ತಮ್ಮ ವೇತನ ಶ್ರೇಣಿಯ ಸುಧಾರಣೆಗೆ ಇದೀಗ ಅವಕಾಶ ದೊರೆಯಲಿದೆ.
ಈ ಸಂಬಂಧ ಸರ್ಕಾರ 'ಸೂಪರ್‌ವೈಸರಿ ಕೇಡರ್'ನವರಿಗೆ ಹೊಸ ಅವಕಾಶಗಳನ್ನು ಘೋಷಿಸಿದ್ದು, ಈ ನೌಕರರು 'ಗ್ರೂಪ್-ಎ' ಅಧಿಕಾರಿಗಳಿಗೆ ಸಮಾನವಾದ ವೇತನ ಶ್ರೇಣಿಯನ್ನು ತಲುಪಲು ಅವಕಾಶ ಸಿಗಲಿದೆ.
ಸರ್ಕಾರದ ಈ ನಿರ್ಧಾರವು, 'ಸೂಪರ್‌ವೈಸರಿ ಕೇಡರ್'ನ ಅಧಿಕಾರಿಗಳಾದ ಸ್ಟೇಷನ್ ಮಾಸ್ಟರ್, ಟಿಕೆಟ್ ಚೆಕ್ಕರ್, ಟ್ರಾಫಿಕ್ ಇನ್ಸ್‌ಪೆಕ್ಟರ್, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಸ್ ಅಂಡ್ ಟಿ ಟ್ರಾಫಿಕ್ ಕೆಮಿಕಲ್ ಮತ್ತು ಎಸ್ ಅಂಡ್ ಟಿ, ಮೆಟಲರ್ಜಿಕಲ್, ಸ್ಟೋರ್ಸ್ ಮತ್ತು ವಾಣಿಜ್ಯ ವಿಭಾಗಗಳ ಮೇಲ್ವಿಚಾರಕರಂತಹ ಸುಮಾರು 40,000 ಸಿಬ್ಬಂದಿಗೆ ತಕ್ಷಣವೇ ಪ್ರಯೋಜನ ದೊರೆಯಲಿದೆ. ಈ ಎಲ್ಲ ಸಿಬ್ಬಂದಿ ತಿಂಗಳಿಗೆ ಸರಾಸರಿ ₹ 2,500ರಿಂದ ₹ 4,000ದವರೆಗೆ ಹೆಚ್ಚುವರಿ ವೇತನ ಪಡೆಯಲಿದ್ದಾರೆ.
'ಸೂಪರ್‌ವೈಸರಿ ಕೇಡರ್'ನವರನ್ನು ಮೇಲ್ದರ್ಜೆಗೇರಿಸಬೇಕು ಎಂಬ ಬೇಡಿಕೆ ಸುಮಾರು 16 ವರ್ಷಗಳಿಂದ ಇತ್ತು. ಗ್ರೂಪ್-ಬಿ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಪರೀಕ್ಷೆ ನಡೆಸಿ 3,712 ಹುದ್ದೆಗಳನ್ನು ಭರ್ತಿ ಮಾಡಿದಾಗ ಮಾತ್ರ ಈ ಗ್ರೇಡಿನ ಕೆಲವರಿಗೆ ಬಡ್ತಿಯ ಅವಕಾಶ ಸಿಕ್ಕಿತ್ತು. ಈಗ ಶೇ 50ರಷ್ಟು ಸಿಬ್ಬಂದಿಗೆ 7ನೇ ಹಂತದಿಂದ 8ನೇ ಹಂತಕ್ಕೆ ಹೋಗಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕ್ರಮದಿಂದ ಇಲಾಖೆಯ ವೇತನ ಬಿಲ್‌ನಲ್ಲಿ ಸುಮಾರು ₹10,000 ಕೋಟಿ ಏರಿಕೆಯಾಗಲಿದೆ. ಆದರೆ ಅದನ್ನು ಪ್ರಾಥಮಿಕವಾಗಿ ಡೀಸೆಲ್ ಬಿಲ್‌ನಲ್ಲಿ ಮಾಡಿದ ಉಳಿತಾಯದಿಂದ ಭರಿಸಲಾಗುತ್ತದೆ ಎಂದು ಸಚಿವರು ವಿವರಿಸಿದರು.