ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ‘ಧಾನ್ಯಲಕ್ಷ್ಮೀ ಕೃಷಿ ಯೋಜನೆ’ಯಲ್ಲಿ ಸಾವಯವವಾಗಿ ಬೆಳೆಸಿದ ಭತ್ತ ಕಟಾವು ಮಾಡುವ “ಕೊಯ್ಲು ಉತ್ಸವ” ಭಾನುವಾರ ಕೃಷಿಕ ಆಸಕ್ತರ ಒಗ್ಗೂಡುವಿಕೆಯಿಂದ ಸಂಭ್ರಮದಲ್ಲಿ ನಡೆಯಿತು. ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪಪ್ರಜ್ವಲನೆಗೈದು ಉದ್ಘಾಟಿಸಿ ಮಾತನಾಡಿ, ನಮ್ಮೆಲ್ಲರ ತಾಯಿ ಭಾರತಮಾತೆಯ ಈ ಭೂಮಿ ತಾಯನ್ನು ಕೃಷಿಮಾಡುವ ಮೂಲಕ ಹಸಿರಿನಿಂದ ಶೃಂಗರಿಸಿ, ಶುದ್ಧ ಆಹಾರದ ಜೊತೆ ಆಮ್ಲಜನಕವನ್ನೂ ಪಡೆಯೋಣ.ಈ ನೆಲದ ಸುಫಲತೆಯನ್ನು ಸಫಲಗೊಳಿಸಲು ಪ್ರತಿಯಬ್ಬರೂ ಅನುಕೂಲವಿದ್ದಷ್ಟು ಕೃಷಿ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕರ್ನಾಟಕ ಸರ್ಕಾರದ ವಿಧಾನಪರಿಷತ್ತು ಮಾಜಿ ಸದಸ್ಯ ಮೋನಪ್ಪ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಂಜೇಶ್ವರ ತಾಲೂಕ ಡೆಪ್ಯುಟಿ ತಹಶೀಲ್ದಾರ್ ಶ್ರೀ ಸಿ.ಡೆಲಿ ಪ್ರಸಾದ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮುಕೇಶ್ ಹಾಗೂ ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ವಿಜಯಕುಮಾರ್ ಕಾರ್ಯಕ್ರಮವನ್ನು ಶ್ಲಾಘಿಸಿ, ಭತ್ತಕೃಷಿಯ ಅಗತ್ಯತೆಯ ಕುರಿತು ಮಾತನಾಡಿದರು. ಚಂದ್ರಹಾಸ್ ಶೆಟ್ಟಿ ಕುಳೂರು ಕನ್ಯಾನ ಮತ್ತು ಅಶ್ವತ್ಥ್ ಪೂಜಾರಿ ಚಿಪ್ಪಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆ ಹಾಡಿದರು. ಸರ್ವೇಶ್ ಕೊರಂಬಳ ಸ್ವಾಗತಿಸಿ, ಭರತ್ ರಾಜ್ ವಂದಿಸಿದರು. ಸದಾಶಿವ ಮೋಂತಿಮಾರು ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮುಟ್ಟಾಳೆ ಧರಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಕೊಂಬು ಚೆಂಡೆ ವಾದನದೊಡನೆ ಪೂಜ್ಯಶ್ರೀಗಳ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಗದ್ದೆಯೆಡೆಗೆ ಸಾಗಿ, ಕಟಾವು ಮಾಡಲಾಯಿತು. 90ರ ಇಳಿ ಹರೆಯದ ಹೇರೂರಿನ ಕಮಲಮ್ಮ ಮತ್ತು ಪುಟಾಣಿಗಳು ಉತ್ಸಾಹದಿಂದ ಕೊಯ್ಲು ಉತ್ಸವದಲ್ಲಿ ಭಾಗವಹಿಸಿದುದು, ವಿಶೇóಷವಾಗಿತ್ತು.