ನವದೆಹಲಿ : ಪ್ರಸಕ್ತ ಸಾಲಿನ ಮೊದಲ ಒಂಭತ್ತು ತಿಂಗಳುಗಳಲ್ಲಿ ಚೀನಾದಿಂದ ಭಾರತದ ಆಮದುಗಳು ಶೇ.31ರಷ್ಟು ಏರಿಕೆಯಾಗಿದ್ದು, ಇದು ವ್ಯಾಪಾರ ಕೊರತೆಯನ್ನು ದಾಖಲೆಯ ಎತ್ತರಕ್ಕೆ ಹೆಚ್ಚಿಸಿದೆ.2022ರ ಜನವರಿ ಮತ್ತು ಸೆಪ್ಟಂಬರ್ ನಡುವೆ ಭಾರತವು ಚೀನಾದಿಂದ 89.66 ಶತಕೋಟಿ ಡಾ.ವೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು,ಇದು ಈ ಅವಧಿಯಲ್ಲಿ ದಾಖಲಾಗಿರುವ ಸಾರ್ವಕಾಲಿಕ ಗರಿಷ್ಠ ಪ್ರಮಾಣವಾಗಿದೆ.
ಇದಕ್ಕೂ ಮುನ್ನ 2021ರ ಈ ಅವಧಿಯು ಸಾರ್ವಕಾಲಿಕ ದಾಖಲೆಯನ್ನು ಹೊಂದಿದ್ದು,ಆಗ 68.46 ಶತಕೋಟಿ ಡಾ.ವೌಲ್ಯದ ಸರಕುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು.
ಆಮದುಗಳಲ್ಲಿ ಹೆಚ್ಚಿನ ಏರಿಕೆಯು ಬಂಡವಾಳ ಸರಕುಗಳು ಅಥವಾ 'ಇನ್‌ಪುಟ್ ಗುಡ್ಸ್ 'ವರ್ಗದಲ್ಲಿ ಕಂಡು ಬಂದಿದೆ. 2022 ಮತ್ತು 2021ರ ನಡುವೆ ಚೀನಾದಿಂದ ಬಂಡವಾಳ ಸರಕುಗಳ ಆಮದು ಪ್ರತಿವರ್ಷ ಸರಾಸರಿ ಸುಮಾರು ಶೇ.10ರಷ್ಟು ಏರಿಕೆಯನ್ನು ಕಂಡಿದೆ.2022ರಲ್ಲಿ ಒಂದು ಶತಕೋಟಿ ಡಾ.ಗೂ ಅಧಿಕ ವೌಲ್ಯದ ಆಮದು ಸರಕುಗಳ ಪೈಕಿ ಕಬ್ಬಿಣ ಮತ್ತು ಉಕ್ಕುಗಳ ಆಮದು ಪ್ರಮಾಣ ತೀವ್ರ ಏರಿಕೆಯಾಗಿದೆ. 2021 ಜನವರಿ-ಆಗಸ್ಟ್ ನಡುವೆ ಭಾರತವು ಚೀನಾದಿಂದ 0.74 ಶತಕೋಟಿ ಡಾ.ವೌಲ್ಯದ ಕಬ್ಬಿಣ ಮತ್ತು ಉಕ್ಕನ್ನು ಆಮದು ಮಾಡಿಕೊಂಡಿದ್ದರೆ 2022ರಲ್ಲಿ ಇದು 1.14 ಶತಕೋಟಿ ಡಾ.ಗಳಷ್ಟಾಗಿದೆ,ಅಂದರೆ ಶೇ.54ರಷ್ಟು ಏರಿಕೆಯನ್ನು ಕಂಡಿದೆ.
2022ರಲ್ಲಿ ಪ್ಲಾಸ್ಟಿಕ್ ಮತ್ತು ಪ್ಲಾಸ್ಟಿಕ್ ವಸ್ತುಗಳ ಆಮದು ಕೂಡ ಸಾಕಷ್ಟು ಹೆಚ್ಚಾಗಿದೆ. ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಕ್ ಯಂತ್ರಗಳು ಹಾಗೂ ಅವುಗಳ ಬಿಡಿಭಾಗಗಳ ಆಮದು ಕೂಡ ಶೇ.37ರಷ್ಟು ಏರಿಕೆಯಾಗಿದೆ.2017ರ ಡೋಕ್ಲಾಮ್ ಬಿಕ್ಕಟ್ಟಿನ ಬಳಿಕ ಭಾರತ ಮತ್ತು ಚೀನಾ ನಡುವೆ ಗಡಿ ಸಂಬಂಧಗಳು ಹದಗೆಟ್ಟಿರುವುದರಿಂದ ಕೆಲವು ಅತಿರಾಷ್ಟ್ರವಾದಿ ಗುಂಪುಗಳು ಭಾರತದಲ್ಲಿ ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಕರೆಗಳನ್ನು ನೀಡಿದ್ದವು. ಆದರೆ ಚೀನಿ ಸರಕುಗಳ ಬಳಕೆ ಭಾರತದಲ್ಲಿ ಹೆಚ್ಚುತ್ತಲೇ ಇದೆ ಎನ್ನುವುದನ್ನು ಆಮದು ಅಂಕಿಅಂಶಗಳು ತೋರಿಸಿವೆ.