ಕಾಸರಗೋಡು: ತುರ್ತು ಪರಿಸ್ಥಿತಿಯಂತಹ ಕರಾಳ ಮಸೂದೆಯನ್ನು ಹೇರುವ ಮೂಲಕ ಪ್ರಜಾಪ್ರಭುತ್ವ ದೇಶವನ್ನು ಕತ್ತಲೆಯೆಡೆಗೆ ತಳ್ಳಿದ ನೈಜ ಘಟನೆಗಳು ಮುಂದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪಠ್ಯ ವಿಷಯವಾಗಿ ಬರಬೇಕಾಗಿದೆ ಎಂದು ಗೋವಾ ರಾಜ್ಯಪಾಲ ಪಿ.ಎಸ್ ಶ್ರೀಧರನ್ ಪಿಳ್ಳೆ ತಿಳಿಸಿದ್ದಾರೆ.
ಅವರು ಸೋಮವಾರ ಕಾಸರಗೋಡು ಹೊಸ ಬಸ್ ನಿಲ್ದಾಣದ ಬಳಿ ಇರುವ ಜೀವಸ್ ಮಾನಸ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹಾಗೂ ತುರ್ತುಪರಿಸ್ಥಿತಿ ಸಂತ್ರಸ್ತರ ಸಂಘದ ಉಪಾಧ್ಯಕ್ಷ ವಿ.ರವೀಂದ್ರನ್ ಅವರು ಬರೆದಿರುವ 'ತುರ್ತು ಪರಿಸ್ಥಿತಿಯ ಕರಾಳ ದಿನಗಳು'ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಚರಿತ್ರೆಯ ಭಾಗವಾಗಬೇಕಾದ ತುರ್ತು ಪರಿಸ್ಥಿತಿಯ ಕರಾಳ ಘಟನೆಗಳನ್ನು ಮುಚ್ಚಿಹಾಕಲಾಗಿರುವುದು ದುರಂತ. ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಜನತೆಯನ್ನು ಎರಡನೇ ದರ್ಜೆ ನಾಗರಿಕರಂತೆ ಬೇಟೆಯಾಡಿರುವುದಲ್ಲದೆ, ದೇಶವನ್ನು ಒತ್ತೆಯಿರಿಸಿದ ಕ್ಷಣ ಅದಾಗಿತ್ತು. ತುರ್ತು ಪರಿಸ್ಥಿತಿಯ ಹೋರಾಟದ ಚರಿತ್ರೆಯನ್ನು ಅನಾವರಣಗೊಳಿಸುವಲ್ಲಿ 'ತುರ್ತು ಪರಿಸ್ಥಿತಿಯ ಕರಾಳ ದಿನಗಳು'ಪುಸ್ತಕ ಸಹಕಾರಿಯಾಗಿದ್ದು, ಚರಿತ್ರಾರ್ಹ ಹೋರಾಟವನ್ನು ಮುಂದಿನ ಪೀಳಿಗೆಗೆ ವಿನಿಮಯಮಾಡಿಕೊಳ್ಳಲು ಸಹಕಾರಿಯಾಗುವುದಾಗಿ ಅಭಿಪ್ರಾಯಪಟ್ಟರು.
ಸ್ವಾಗತ ಸಮಿತಿ ಅಧ್ಯಕ್ಷ ಕೆ. ಮಾಧವ ಹೇರಳ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ರಾಧಾಕೃಷ್ಣನ್ ಕೆ.ಪಿ ಪ್ರಥಮ ಪ್ರತಿ ಸ್ವೀಕರಿಸಿದರು. ಕವಿ, ಸಾಹಿತಿ ಉಪೇಂದ್ರನ್ ಮಡಿಕೈ ಪುಸ್ತಕ ಪರಿಚಯ ನೀಡಿದರು.
ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ರಾಮನ್ ಪಿಳ್ಳೆ, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವೀಶತಂತ್ರಿ ಕುಂಟಾರು, ಜನ್ಮಭೂಮಿ ಪತ್ರಿಕೆ ಮಾಜಿ ಪ್ರಧಾನ ಸಂಪಾದಕ ಪಿ. ನಾರಾಯಣನ್, ತುರ್ತು ಪರಿಸ್ಥಿತಿ ಸಂತ್ರಸ್ತರ ಸಂಘದ ರಾಜ್ಯಾಧ್ಯಕ್ಷ ಕೆ. ಶಿವದಾಸನ್, ಪ್ರಧಾನ ಕಾರ್ಯದರ್ಶಿ ಆರ್. ಮೋಹನನ್, ಪುಸ್ತಕದ ಲೇಖಕ ವಿ.ರವೀಂದ್ರನ್ ಉಪಸ್ಥಿತರಿದ್ದರು. ವಕೀಲ ರಾಜ್‍ಮೋಹನ್ ಕರಿಂದಳಂ ಸ್ವಾಗತಿಸಿದರು. ಕೋಳಾರು ಸತೀಶ್ಚಂದ್ರ ಭಂಡಾರಿ ವಂದಿಸಿದರು.