ಬೆಂಗಳೂರು: ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಲಾಗಿರುವ ಡಿಜಿಟಲ್ ಕರೆನ್ಸಿ ನಾಡಿದ್ದೇ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ. ಅಂದರೆ ಡಿ. 1ರಂದು ಡಿಜಿಟಲ್ ಕರೆನ್ಸಿ ಪ್ರಾಯೋಗಿಕವಾಗಿ ಚಲಾವಣೆಗೆ ಬರಲಿದೆ ಎಂದು ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಈಗಾಗಲೇ ಚಾಲ್ತಿಯಲ್ಲಿರುವ ನೋಟು-ನಾಣ್ಯಗಳಿಗೆ ಪರ್ಯಾಯವಾಗಿರುವ ಈ ಡಿಜಿಟಲ್ ಕರೆನ್ಸಿ ಅದೇ ಮುಖಬೆಲೆಗಳಲ್ಲಿ ಎಲೆಕ್ಟ್ರಾನಿಕ್ ರೂಪದಲ್ಲಿ ಚಲಾವಣೆಗೆ ಬರಲಿದೆ. ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಪಾಲುದಾರ ಬ್ಯಾಂಕ್ಗಳ ವ್ಯಾಲೆಟ್ ಮೂಲಕ ಇವರು ಲಭ್ಯವಿದ್ದು, ಮೊಬೈಲ್ಫೋನ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದೆ.
ಆರಂಭದಲ್ಲಿ ಇದು ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಭುವನೇಶ್ವರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಆನಂತರ ಅಹಮದಾಬಾದ್, ಗ್ಯಾಂಗ್ಟಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಾಟ್ನಾ ಮತ್ತು ಶಿಮ್ಲಾಗಳಲ್ಲಿ ಜಾರಿಗೆ ಬರಲಿದೆ.
ಎಸ್ಬಿಐ, ಐಸಿಐಸಿಐ, ಯೆಸ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ಗಳಲ್ಲಿ ಇದು ಮೊದಲ ಹಂತದಲ್ಲಿ ಹಾಗೂ ಎರಡನೇ ಹಂತದಲ್ಲಿ ಬ್ಯಾಂಕ್ ಆಫ್ ಬರೋಡ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ, ಕೋಟಕ್ ಮಹಿಂದ್ರ ಬ್ಯಾಂಕ್ಗಳಲ್ಲಿ ಲಭ್ಯವಿರಲಿದೆ.
ವ್ಯಕ್ತಿ-ವ್ಯಕ್ತಿ, ವ್ಯಕ್ತಿ-ವ್ಯಾಪಾರಿಗಳ ನಡುವಿನ ಚಲಾವಣೆಗೆ ಬಿಡಲಾಗುವ ಈ ಡಿಜಿಟಲ್ ಕರೆನ್ಸಿಯನ್ನು ವ್ಯಾಪಾರಿಗಳು ನೀಡುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿಸಬಹುದು. ಡಿಜಿಟಲ್ ಕರೆನ್ಸಿಗೆ ಯಾವುದೇ ಬಡ್ಡಿ ಸಿಗುವುದಿಲ್ಲ ಮತ್ತು ಇದನ್ನು ಬೇಕಾದಾಗ ನಗದು ರೂಪಕ್ಕೆ ಪರಿವರ್ತಿಸಿಕೊಳ್ಳಬಹುದು. ಸಾಧಕ-ಬಾಧಕಗಳನ್ನು ತಿಳಿಯುವ ಸಲುವಾಗಿ ಈ ಪ್ರಾಯೋಗಿಕ ಚಲಾವಣೆ ನಡೆಸಲಾಗುತ್ತದೆ ಎಂದು ಆರ್ಬಿಐ ತಿಳಿಸಿದೆ.