ಭಾರತ್‌ಪುರ : ವಿದ್ಯಾರ್ಥಿಯೊಬ್ಬಳನ್ನು ವಿವಾಹವಾಗಲು ಶಿಕ್ಷಕಿಯೊಬ್ಬರು ಲಿಂಗ ಬದಲಾವಣೆ ಮಾಡಿದ ಅಪರೂಪದ ಹಾಗೂ ಅಚ್ಚರಿಯ ಘಟನೆ ರಾಜಸ್ಥಾನಲ್ಲಿ ನಡೆದಿದೆ. ಇಬ್ಬರ ವಿವಾಹ ಭಾನುವಾರ ಜರುಗಿದೆ.
ಭಾರತ್‌ಪುರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಮೀರಾ, ತಮ್ಮ ವಿದ್ಯಾರ್ಥಿ ಕಲ್ಪನಾ ಫೌಜ್ದರ್ ಎಂಬಾಕೆಯನ್ನು ಪ್ರೀತಿಸುತ್ತಿದ್ದರು.
ಆಕೆಯನ್ನು ವಿವಾಹವಾಗಲು ಮೀರಾ ತಮ್ಮ ಲಿಂಗವನ್ನು ಬದಲಾಯಿಸಿಕೊಂಡಿದ್ದಾರೆ.
'ಪ್ರೀತಿಯಲ್ಲಿ ಎಲ್ಲವೂ ಸರಿಯೇ. ಹೀಗಾಗಿ ನಾನು ನನ್ನ ಲಿಂಗವನ್ನು ಬದಲಾಯಿಸಿಕೊಂಡೆ' ಎಂದು ಮೀರಾ ಹೇಳಿದ್ದಾರೆ. ಈಗ ತಮ್ಮ ಹೆಸರನ್ನು ಆರವ್ ಕುಂತಾಲ್ ಎಂದು ಬದಲಾಯಿಸಿಕೊಂಡಿದ್ದಾರೆ.
'ಶಾಲೆಯ ಮೈದಾನದಲ್ಲಿ ಕಲ್ಪನಾಳ ಜತೆಗೆ ಮಾತನಾಡುತ್ತಿದ್ದೆ. ಅವಳ ಮೇಲೆ ನನಗೆ ಪ್ರೀತಿ ಹುಟ್ಟಿತ್ತು. ನಾನು ಹುಡುಗಿಯಾಗಿ ಹುಟ್ಟಿರಬಹುದು. ಆದರೆ ಬಾಲ್ಯದಿಂದಲೇ ನಾನು ಹುಡುಗ ಆಗಬೇಕು ಎಂದು ಬಯಸಿದ್ದೆ. ಹೀಗಾಗಿ ನಾನು ಲಿಂಗ ಬದಲಾವಣೆ ಸರ್ಜರಿಗೆ ಒಳಗಾದೆ. 2019ರ ಡಿಸೆಂಬರ್‌ನಲ್ಲಿ ಮೊದಲ ಸರ್ಜರಿ ನಡೆದಿತ್ತು' ಎಂದು ಆರವ್ ಹೇಳಿದ್ದಾರೆ.
ಕಲ್ಪನಾ ಕೂಡ ಈ ಮದುವೆಗೆ ಸಂತಸ ವ್ಯಕ್ತಪಡಿಸಿದ್ದಾರೆ. 'ಭೇಟಿಯಾದ ಆರಂಭದ ದಿನದಿಂದಲೂ ನನಗೆ ಆತನ ಮೇಲೆ ಪ್ರೀತಿ ಹುಟ್ಟಿತ್ತು. ಆತ ಲಿಂಗ ಬದಲಾವಣೆ ಮಾಡಿಕೊಳ್ಳದಿದ್ದರೂ ನಾನು ವಿವಾಹವಾಗುತ್ತಿದ್ದೆ' ಎಂದು ಹೇಳಿದ್ದಾರೆ.
ಇಂಥ ಘಟನೆಗಳು ಭಾರತದಲ್ಲಿ ನಡೆಯುವುದು ತೀರಾ ಅಪರೂಪ ಆಗಿದ್ದರೂ, ಇಬ್ಬರೂ ಪೋಷಕರ ಅನುಮತಿ ಪಡೆದೇ ವಿವಾಹವಾಗಿದ್ದು ವಿಶೇಷ.