ನವದೆಹಲಿ: 'ಮೂಲಭೂತ ಕರ್ತವ್ಯಗಳನ್ನು ಈಡೇರಿಸುವುದೇ ನಾಗರಿಕರ ಪ್ರಥಮ ಆದ್ಯತೆಯಾಗಬೇಕು. ಇದರಿಂದ ದೇಶವನ್ನು ಇನ್ನಷ್ಟು ಎತ್ತರಕ್ಕೆ ಒಯ್ಯಬಹುದು' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ 'ಸಂವಿಧಾನ ಸಮರ್ಪಣಾ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಇಡೀ ಜಗತ್ತು ಭಾರತದತ್ತ ದೃಷ್ಟಿ ಹರಿಸಿದೆ.
ಆರ್ಥಿಕತೆಯ ತ್ವರಿತ ಪ್ರಗತಿಯನ್ನು ಗಮನಿಸುತ್ತಿದೆ' ಎಂದರು.
ಭಾರತವು ಮುಂದಿನ ವಾರ ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುತ್ತಿದೆ. ವಿಶ್ವಕ್ಕೇ ದೇಶದ ಕೊಡುಗೆಯನ್ನು ಬಿಂಬಿಸಲು ಇದು ದೇಶಕ್ಕೆ ದೊರೆತಿರುವ ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.
'ಒಂದು ತಂಡವಾಗಿ ದೇಶದ ಪ್ರತಿಷ್ಠೆಯನ್ನು ವಿಶ್ವದ ಎತ್ತರಕ್ಕೆ ನಾವು ಒಯ್ಯಬೇಕು. ಇದು, ನಮ್ಮೆಲ್ಲರ ಸಂಘಟಿತ ಹೊಣೆಯಾಗಿದೆ. ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಸ್ಥಾನವನ್ನು ಭದ್ರಪಡಿಸಬೇಕಿದೆ' ಎಂದು ಹೇಳಿದರು.
ಸಂವಿಧಾನದ ಆಶಯ, ಚಿಂತನೆಗಳನ್ನು ಬಲಪಡಿಸುವುದು ಹಾಗೂ ಬಡವರು, ಮಹಿಳೆಯರನ್ನು ಸಬಲರಾಗಿಸಲು ಜನಪರ ನೀತಿಗಳ ಅನುಷ್ಠಾನದ ದೃಷ್ಟಿಯಿಂದ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಭಾರತ ತಾಯಿಯ ಸ್ಥಾನದಲ್ಲಿದೆ. ಸ್ಥಿರತೆ ಕುರಿತು ಆರಂಭದಲ್ಲಿ ಅನಿಶ್ಚಿತತೆ ಇದ್ದರೂ ಭಾರತ ಈಗ ಪೂರ್ಣಬಲದೊಂದಿಗೆ ಮುನ್ನುಗ್ಗುತ್ತಿದೆ ಎಂದರು.
ಸಂವಿಧಾನ ಪೀಠಿಕೆಯ ಮೊದಲ ಮೂರು ಶಬ್ದಗಳು -ವೀ ದ ಪೀಪಲ್- ಎಂದಿದೆ. ಇದು, ಅಭಿಪ್ರಾಯ, ವಿಶ್ವಾಸ ಮತ್ತು ಪ್ರಮಾಣ ಎಂಬುದನ್ನು ಬಿಂಬಿಸಲಿದೆ. ಸಂವಿಧಾನದ ಆಶಯ ಭಾರತದ ಆಶಯವೂ ಆಗಿದೆ. ಆಧುನಿಕ ಕಾಲದಲ್ಲಿ ದೇಶದ ಭಾವನೆ ಮತ್ತು ಸಂಸ್ಕೃತಿಯನ್ನು ಸಂವಿಧಾನ ಒಳಗೊಂಡಿದೆ ಎಂದು ಪ್ರಧಾನಿ ಹೇಳಿದರು.
ಮಹಾತ್ಮಗಾಂಧಿ ಅವರ ಮಾತು ಉಲ್ಲೇಖಿಸಿದ ಅವರು, ನಾಗರಿಕರು ಪ್ರಥಮ ಆದ್ಯತೆಯಾಗಿ ನಿಭಾಯಿಸಬೇಕಾದ ಹೊಣೆಗಾರಿಕೆಗಳೇ ಮೂಲಭೂತ ಹಕ್ಕುಗಳಾಗಿವೆ. ಮುಂದಿನ 25 ವರ್ಷಗಳು ದೇಶದ ಅಭಿವೃದ್ಧಿ ದೃಷ್ಟಿಯಿಂದ ಅಮೃತ ಕಾಲವಾಗಿದೆ. ಇದು, ಹೊಣೆ ನಿಭಾಯಿಸುವ ಕರ್ತವ್ಯಕಾಲವೂ ಆಗಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕಾನೂನು ಸಚಿವ ಕಿರಣ್ ರಿಜಿಜು, ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.